*ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ ಕುರಿತು ಚರ್ಚೆ*

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇಲ್ಲಿನ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದಡಿ ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಚಿಕ್ಕಮರಸ ಗ್ರಾಮದಲ್ಲಿ ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ ಕುರಿತು ಗುಂಪು ಚರ್ಚೆಯನ್ನು ಕೈಗೊಂಡಿದ್ದರು.  
 ಈ ಗುಂಪು ಚರ್ಚೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ಎಂ ಡಿ ಮಾತನಾಡಿ "ಕೃಷಿಗೆ, ವಿಶೇಷವಾಗಿ ಅಡಿಕೆ ತೋಟಗಳಿಗೆ ಅತ್ಯಂತ ಮೌಲ್ಯಯುತವಾದ ಸಾವಯವ ಗೊಬ್ಬರವಾಗಿದೆ. ಈ ಗೊಬ್ಬರದಲ್ಲಿ ಸಸ್ಯಗಳ ಅತ್ಯಗತ್ಯ ಪೋಷಕಾಂಶವಾದ ಪೊಟ್ಯಾಷಿಯಂ ಅಧಿಕ ಪ್ರಮಾಣದಲ್ಲಿದ್ದು, ಇದು ಮರಗಳ ಸದೃಢ ಬೆಳವಣಿಗೆಗೆ ಮತ್ತು ಕಾಯಿ ಕಚ್ಚಲು ನೆರವಾಗುತ್ತದೆ. ತೋಟದ ತ್ಯಾಜ್ಯವಾದ ಸಿಪ್ಪೆಯನ್ನು ವ್ಯರ್ಥ ಮಾಡದೆ ಗೊಬ್ಬರವಾಗಿ ಪರಿವರ್ತಿಸುವುದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ. " ಎಂದು ತಿಳಿಸಿದರು.
   ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಅಡಿಕೆ ಸಿಪ್ಪೆ ಗೊಬ್ಬರವನ್ನು ಸಮರ್ಪಕವಾಗಿ ತಯಾರಿಸುವ ವಿಧಾನ, ಅದಕ್ಕೆ ಬಳಸಬೇಕಾದ ಜೈವಿಕ ಸೂಕ್ಷ್ಮಜೀವಿಗಳು ಹಾಗೂ ಅದರಲ್ಲಿ ಅಡಕವಾಗಿರುವ ಪೋಷಕಾಂಶಗಳ ಬಗ್ಗೆ ಸ್ಥಳೀಯ ರೈತರಿಗೆ ಸಂಪೂರ್ಣ ತಾಂತ್ರಿಕ ವಿವರಗಳನ್ನು ನೀಡಿದರು. ತೋಟದ ಒಣ ತ್ಯಾಜ್ಯವನ್ನು ಸುಡುವುದರಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಿ, ಅದನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಸ್ನೇಹಿ ಕೃಷಿ ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸಲಾಯಿತು.
      ಈ ಸಂದರ್ಭದಲ್ಲಿ ಚಿಕ್ಕಮರಸ ಗ್ರಾಮದ 30ಕ್ಕೂ ಹೆಚ್ಚು ಪ್ರಗತಿಪರ ರೈತರು ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಪವಿತ್ರ, ಪ್ರಿಯಾ, ಸ್ಟಾಲಿನ್, ನಯನ, ಮಲ್ಲಿಕಾರ್ಜುನ್ , ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದು, ರೈತರ ಸಂಶಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.