ತಾಲೂಕು ಮಟ್ಟದ 'ಯುವ ಸಂಸತ್' ಸ್ಪರ್ಧೆ*ಸಾಮಾನ್ಯ ನಾಗರೀಕರಲ್ಲೂ ಶಾಸಕನಾಗುವ ಅವಕಾಶವಿದೆ : ಆರ್ ಕೆ ಸಿದ್ದರಾಮಣ್ಣ*
ಶಿವಮೊಗ್ಗ, : ಪ್ರತಿಯೊಬ್ಬ ಸಾಮಾನ್ಯ ನಾಗರಿಕರಲ್ಲೂ ಶಾಸಕರಾಗುವ ಅವಕಾಶವಿದ್ದು, ಉತ್ತಮ ಶಾಸಕರು ಆಯ್ಕೆಯಾಗಿ ಬರಬೇಕು. ಆಗ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗುವುದಿಲ್ಲ ಎಂದು ಮಾಜಿ ವಿಧಾನ ಪರಿಷತ್ ಶಾಸಕರಸದ ಆರ್.ಕೆ ಸಿದ್ದರಾಮಣ್ಣ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಹಭಾಗಿತ್ವದಲ್ಲಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ 'ಯುವ ಸಂಸತ್' ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಪ್ರಮುಖರು ಏಕಕಾಲದಲ್ಲಿ ಆಡಳಿತ ನಡೆಸಲು ಬರುವುದಿಲ್ಲವಾದ್ದರಿಂದ ಪ್ರತಿ ಐದು ವರ್ಷಕ್ಕೊಮ್ಮೆ ನಮ್ಮ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿ ಕಳುಹಿಸುತ್ತೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ (ಡಿಸ್ಕಸ್),ವಾದ-ವಿವಾದ (ಡಿಬೇಟ್), ಮತ್ತು ಭಿನ್ನಾಭಿಪ್ರಾಯಗಳ ದಾಖಲಾತಿ (ಡಿಸೆಂಟ್) ಎಂಬ ಮೂರು ಪ್ರಮುಖ ಸ್ತಂಭಗಳಿವೆ. ಇವು ವ್ಯವಸ್ಥೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.
ನಮಗೆ ಬೇಕಾದ ಕಾಯ್ದೆಗಳನ್ನು ರೂಪಿಸಲು ನಾವು ಶಾಸಕರನ್ನು ಆಯ್ಕೆ ಮಾಡುತ್ತೇವೆ ಮತ್ತು ಶಾಸಕರು ಸಮಾಜಕ್ಕೆ ಅಗತ್ಯವಿರುವ ಕಾಯ್ದೆಗಳನ್ನು ರೂಪಿಸುವ ಜವಾಬ್ದಾರಿ ಹೊಂದಿರುತ್ತಾರೆ. ಆದ್ದರಿಂದ ಉತ್ತಮ ಶಾಸಕರು ಆಯ್ಕೆಯಾಗಿ ಬರಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕರು ಕೂಡ ಶಾಸಕರಾಗುವ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವ ಅವಕಾಶವಿದ್ದು, ಯುವಜನರಾದ ನೀವು ಉತ್ತಮ ರಾಜಕಾರಣಿಗಳಾಗಿ ಹೊರಹೊಮ್ಮಬೇಕೆಂದರು.
ಯುವ ಸಂಸತ್ತಿನ ಸಭಾಪತಿಯಾಗಿದ್ದ ಅನನ್ಯ ಮಾತನಾಡಿ, ನಿತ್ಯ ವಿದ್ಯಾರ್ಥಿಗಳಾಗಿದ್ದ ನಾವೆಲ್ಲರೂ ಇಂದು ಒಂದು ದಿನದ ಮಟ್ಟಿಗೆ ಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಸದಸ್ಯರಾಗಿ ಭಾಗವಹಿಸುತ್ತಿದ್ದೇವೆ.
ಜವಾಬ್ದಾರಿಯ ಅರಿವು: ಜನಪ್ರತಿನಿಧಿಗಳ ಹಾಗೂ ನಾಯಕರ ಜವಾಬ್ದಾರಿಗಳು ಯಾವ ರೀತಿ ಇರುತ್ತವೆ ಎಂಬುದನ್ನು ಇಂದು ನಾವು ಪ್ರತ್ಯಕ್ಷವಾಗಿ ತಿಳಿದುಕೊಳ್ಳುತ್ತಿದ್ದೇವೆ.
ವಾಣಿಜ್ಯ, ವಿಜ್ಞಾನ ಸೇರಿದಂತೆ ವಿವಿಧ ಹಿನ್ನೆಲೆಯಿಂದ ಬಂದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಂವಿಧಾನದ ಅರ್ಥ ಹಾಗೂ ಸಂಸತ್ತಿನ ಕಲಾಪಗಳು ಹೇಗೆ ನಡೆಯುತ್ತವೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಓ ರಮೇಶ್, ಕಾನೂನು ಕಾಲೇಜು ಪ್ರಾಂಶುಪಾಲರಾದ ಅನಲಾ, ನಿವೃತ್ತ ಉಪನ್ಯಾಸಕರಾದ ದಿಲೀಪ್ ಕುಮಾರ್ ಪಾಂಡೆ, ಘನಶ್ಯಾಮ,ಉಪನ್ಯಾಸಕ ಮಂಜುನಾಥ್, ಶಿಕ್ಷಕ ಸತೀಶ್ ಹಾಜರಿದ್ದರು.
112 ವಿದ್ಯಾರ್ಥಿಗಳ ಭಾಗಿ ಹಾಗೂ ಪ್ರಮುಖ ಮಸೂದೆಗಳ ಮಂಡನೆ: ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನೊಳಗೊಂಡ ಒಟ್ಟು 112 ಜನರನ್ನು ಒಳಗೊಂಡ ಈ ಅಧಿವೇಶನದಲ್ಲಿ ಮೂರು ಪ್ರಮುಖ ಮಸೂದೆಗಳ ಮಂಡನೆ ಮತ್ತು ಚರ್ಚೆ ನಡೆಯಿತು.
=======================================
ಯುವ ಸಂಸತ್ ಕಲಾಪ :
112 ಜನರನ್ನು ಒಳಗೊಂಡ ಮಹತ್ವದ ಅಧಿವೇಶನವು ಅತ್ಯಂತ ಯಶಸ್ವಿಯಾಗಿ ಜರುಗಿತು. ಪ್ರಜಾಪ್ರಭುತ್ವದ ಮೂಲ ತತ್ವಗಳಾದ ಚರ್ಚೆ, ವಾದ-ವಿವಾದ ಮತ್ತು ಭಿನ್ನಾಭಿಪ್ರಾಯಗಳ ದಾಖಲೆಗೆ ಮುಕ್ತ ಅವಕಾಶ ಕಲ್ಪಿಸಿದ್ದ ಈ ಅಧಿವೇಶನದಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟದ ಪ್ರಮುಖ ವಿಷಯಗಳ ಕುರಿತು ಗಹನವಾದ ಸಮಾಲೋಚನೆ ನಡೆಸಲಾಯಿತು.
ಯುವ ಸಂಸತ್ಪಟುಗಳು ಕಟ್ಟುನಿಟ್ಟಾದ ಸಂಸದೀಯ ಶಿಸ್ತು, ಗಂಭೀರತೆ ಹಾಗೂ ಧ್ವನಿಯ ಏರಿಳಿತದೊಂದಿಗೆ ಪ್ರಬುದ್ಧ ಜನಪ್ರತಿನಿಧಿಗಳಂತೆ ನಿಂತು ಮುಖಾಮುಖಿ ಚರ್ಚಿಸುವ ಮೂಲಕ ವಾಕ್ಚಾತುರ್ಯವನ್ನು ಪ್ರದರ್ಶಿಸಿದರು.
ವಿರೋಧ ಪಕ್ಷದ ಸದಸ್ಯರ ಪ್ರಶ್ನೆ : ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲು ಸರ್ಕಾರ ಕೈಗೊಂಡ ಕ್ರಮಗಳೇನು?
ಸಚಿವರ ಉತ್ತರ: ಮಹಿಳೆಯರ ಭದ್ರತೆಗೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡಿದೆ. ರಾಜ್ಯದ ಎಲ್ಲಾ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ‘ಮಹಿಳಾ ಸಹಾಯವಾಣಿ ಮಾರ್ಗದರ್ಶಿ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. ಸೈಬರ್ ಹಾಗೂ ಭೌತಿಕ ದೌರ್ಜನ್ಯ ತಡೆಯಲು '112' ತುರ್ತು ಸಹಾಯವಾಣಿಯನ್ನು ಬಲಪಡಿಸಲಾಗಿದೆ. ಮಹಿಳಾ ವಿರುದ್ಧದ ಅಪರಾಧಗಳ ಶೀಘ್ರ ತನಿಖೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಕಾರ್ಯಾಚರಣೆಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ರಾತ್ರಿ ಗಸ್ತು ಹೆಚ್ಚಿಸಲಾಗಿದೆ.
ಪ್ರಶ್ನೆ: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ವಿವಿಧ ಇಲಾಖೆಗಳಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸರ್ಕಾರ ವಹಿಸಿದ ಕ್ರಮಗಳೇನು?
ಮುಖ್ಯಮಂತ್ರಿಗಳ ಉತ್ತರ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಆಧರಿಸಿ, ಹಂತ-ಹಂತವಾಗಿ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ. ಆದ್ಯತೆಯ ಮೇರೆಗೆ ಶಿಕ್ಷಣ, ಆರೋಗ್ಯ, ಮತ್ತು ಗೃಹ ಇಲಾಖೆಯ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ಸಿ ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಶ್ನೆ: 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಹಾಗೂ ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳೇನು?
ಕಾನೂನು ಸಚಿವರ ಉತ್ತರ: 18 ವರ್ಷದೊಳಗಿನ ಮಕ್ಕಳ ಸುರಕ್ಷತೆಗೆ ಪೋಕ್ಸೋ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸ್ವರ್ಶಜ್ಞಾನ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಪರಾಧ ಪ್ರಕರಣಗಳ ಶೀಘ್ರ ವಿಚಾರಣೆಗೆ ವಿಶೇಷ ಪೋಕ್ಸೋ ನ್ಯಾಯಾಲಯಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
ಪ್ರಶ್ನೆ: ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ಹಗರಣಗಳ ಆರೋಪ ಕೇಳಿಬರುತ್ತಿದ್ದು, ಪಾರದರ್ಶಕತೆ ತರಲು ತೆಗೆದುಕೊಂಡ ಕ್ರಮಗಳೇನು?
ಉಪಮುಖ್ಯಮಂತ್ರಿಗಳ ಉತ್ತರ: ಕೆಪಿಎಸ್ಸಿ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಬದ್ಧವಾಗಿದೆ. ಅಕ್ರಮ ನಡೆದಿರುವ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಭವಿಷ್ಯದಲ್ಲಿ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಡಿಜಿಟಲ್ ಕಣ್ಗಾವಲು, ಸಿಸಿಟಿವಿ ಹಾಗೂ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಲು ತಜ್ಞರ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತಿದೆ.
ಪ್ರಶ್ನೆ: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಶೈಕ್ಷಣಿಕ ವರ್ಷ ಆರಂಭವಾದರೂ ಉಚಿತ ಪಠ್ಯಪುಸ್ತಕ ಸಮರ್ಪಕವಾಗಿ ವಿತರಣೆಯಾಗದಿರಲು ಕಾರಣವೇನು?
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಉತ್ತರ: ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ನಿಯಮಿತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇನ್ನು ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿದಂತೆ, ಶೇ. 95ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಈಗಾಗಲೇ ಶಾಲೆಗಳಿಗೆ ತಲುಪಿಸಲಾಗಿದೆ.
ಪ್ರಶ್ನೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ 50% ಮಕ್ಕಳ ತೂಕ ಕಡಿಮೆಯಿದ್ದು, ಅಪೌಷ್ಟಿಕತೆ ಹೆಚ್ಚಾಗುತ್ತಿರುವುದಕ್ಕೆ ಸರ್ಕಾರದ ಉತ್ತರವೇನು?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಉತ್ತರ: ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸಲು ಪೌಷ್ಟಿಕ ಆಹಾರ ಯೋಜನೆ’ ಹಾಗೂ ವಿಶೇಷ ಪೌಷ್ಟಿಕಾಹಾರ ವಿತರಣೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಬಾಳೆಹಣ್ಣು ಹಾಗೂ ಶಕ್ತಿವರ್ಧಕ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಎನ್ಆರ್ ಸಿ ಗಳ ಮೂಲಕ ವಿಶೇಷ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದೆ.
ವಿರೋಧ ಪಕ್ಷದ ನಾಯಕರ ಪ್ರಶ್ನೆ: ರಾಜ್ಯದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗದಿರುವುದು ಮತ್ತು ಕಲ್ಯಾಣ ಕರ್ನಾಟಕದ 371(ಜೆ) ಅಡಿಯಲ್ಲಿ ಕೆಲಸ ಪಡೆದವರಿಗೆ ಬೆಂಗಳೂರು ಭಾಗದಲ್ಲೇ ಸ್ಥಾನ ನೀಡಿ ಪ್ರಾದೇಶಿಕ ಅಸಮತೋಲನ ಉಂಟುಮಾಡುತ್ತಿರುವುದಕ್ಕೆ ಸರ್ಕಾರದ ನಿಲುವೇನು?
ಪ್ರಶ್ನೆ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ನಿರಂತರ ಕೆಲಸ ಸಿಗುತ್ತಿಲ್ಲ ಹಾಗೂ ಅವರಿಗೆ ನೀಡುತ್ತಿರುವ ಕೂಲಿ ಅತ್ಯಂತ ಕಡಿಮೆಯಾಗಿದೆ. ಕನಿಷ್ಠ ಕೂಲಿ ಕಾಯ್ದೆಯಡಿ ಸೂಕ್ತ ವೇತನ ಹಾಗೂ ಉದ್ಯೋಗ ಭದ್ರತೆ ಒದಗಿಸಲು ಕೈಗೊಂಡ ಕ್ರಮಗಳೇನು?
ಕಾರ್ಮಿಕ ಸಚಿವರ ಉತ್ತರ: ದಿನಗೂಲಿ ನೌಕರರ ಹಿತರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ಕೂಲಿ ದರಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತಿದೆ. ಎಲ್ಲಾ ವಲಯಗಳ ದಿನಗೂಲಿ ನೌಕರರಿಗೆ ಬಾಕಿ ಇರುವ ಕೂಲಿ ಪಾವತಿಸಲು ಮತ್ತು ಶೋಷಣೆ ತಡೆಯಲು ಕಾರ್ಮಿಕ ಇಲಾಖಾ ಅಧಿಕಾರಿಗಳ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಪ್ರಶ್ನೆ: ಬಿಡದಿ ಉಪನಗರ ಯೋಜನೆಯ ಪ್ರಸ್ತುತ ಹಂತವೇನು ಮತ್ತು ಭೂಸಂತ್ರಸ್ತರಿಗೆ ಹಾಗೂ ಪ್ರದೇಶದ ಅಭಿವೃದ್ಧಿಗೆ ಕೈಗೊಂಡ ನಿರ್ದಿಷ್ಟ ಯೋಜನೆಗಳೇನು?
ಉಪಮುಖ್ಯಮಂತ್ರಿಗಳ ಉತ್ತರ: ಬಿಡದಿ ಟೌನ್ಶಿಪ್ ಯೋಜನೆಯನ್ನು ಬೆಂಗಳೂರಿನ ಮೇಲಿನ ಜನಸಂದಣಿ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹೈಟೆಕ್ ನಗರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಮೂಲಸೌಕರ್ಯ ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ.
ಪ್ರಶ್ನೆ: ರಾಜ್ಯದ ಶೇ. 50ರಷ್ಟು ಸರ್ಕಾರಿ ಶಾಲೆಗಳಿಗೆ ಮಾತ್ರ ಇಂಟರ್ನೆಟ್ (ಅಂತರ್ಜಾಲ) ಸಂಪರ್ಕವಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ಕೈಗೊಂಡ ಕ್ರಮಗಳೇನು?
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಉತ್ತರ: ಗ್ರಾಮೀಣ ಭಾಗದ ಶಾಲಾ ಮಕ್ಕಳ ನಡುವಿನ ಡಿಜಿಟಲ್ ಅಂತರವನ್ನು ಕಳೆಯಲು 'ಡಿಜಿಟಲ್ ಕನೆಕ್ಟಿವಿಟಿ' ಯೋಜನೆ ರೂಪಿಸಲಾಗಿದೆ. ಬಿಎಸ್ಎನ್ಎಲ್ ಮತ್ತು ಖಾಸಗಿ ನೆಟ್ವರ್ಕ್ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಉಳಿದ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಹಂತ-ಹಂತವಾಗಿ ಹೈ-ಸ್ಪೀಡ್ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್ರೂಮ್ಗಳನ್ನು ಸ್ಥಾಪಿಸಿ ಪ್ರತಿ ಮಗುವಿಗೂ ಡಿಜಿಟಲ್ ಕಲಿಕೆ ಸಿಗುವಂತೆ ಮಾಡಲಾಗುತ್ತಿದೆ.
ಪ್ರಶ್ನೆ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಆನೆ ಗಾಬರಿಗೊಂಡು ನಡೆದ ಅವಘಡದ ಬಗ್ಗೆ ವರದಿ ಏನು? ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇನು?
ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವರ ಉತ್ತರ: ದಸರಾ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯಿಂದ ವರದಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಶಬ್ದ, ಜನಸಂದಣಿ ಮತ್ತು ಬೆಳಕಿನ ತರಬೇತಿಯನ್ನು ಇನ್ನಷ್ಟು ಸುದೀರ್ಘವಾಗಿ ನೀಡಲಾಗುವುದು. ಮೆರವಣಿಗೆಯ ಮಾರ್ಗದಲ್ಲಿ ಪಟಾಕಿ, ತಮಟೆ ಹಾಗೂ ಹಠಾತ್ ಗದ್ದಲಗಳನ್ನು ನಿಯಂತ್ರಿಸಲು ಬಿಗಿಯಾದ ಎಸ್ಒಪಿ ಜಾರಿಗೊಳಿಸಲಾಗುವುದು ಹಾಗೂ ಹಾನಿಗೆ ಸೂಕ್ತ ಪರಿಹಾರ ನೀಡಲಾಗಿದೆ.
ಪ್ರಶ್ನೆ: ರಾಜ್ಯದಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳಿದ್ದು, ಕೇವಲ ಕೆಲವು ಆಯ್ದ ಶಾಲೆಗಳನ್ನು ಮಾತ್ರ ಮಾದರಿ ಶಾಲೆಗಳಾಗಿ ಉನ್ನತೀಕರಿಸಿದರೆ ಉಳಿದ ಶಾಲೆಗಳ ಅಭಿವೃದ್ಧಿ ಹೇಗೆ?
ಶಿಕ್ಷಣ ಸಚಿವರ ಉತ್ತರ: ಆಯ್ದ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ ಗಳಾಗಿ ಉನ್ನತೀಕರಿಸುವುದು ಮೊದಲ ಹಂತವಾಗಿದೆ. ಆದರೆ ಉಳಿದ ಶಾಲೆಗಳನ್ನು ನಿರ್ಲಕ್ಷಿಸುತ್ತಿಲ್ಲ. ಕೊಠಡಿಗಳ ದುರಸ್ತಿ ಹಾಗೂ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಗದಿಸಲಾಗುತ್ತಿದೆ.
ಪ್ರಶ್ನೆ: ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಯಂತ್ರೋಪಕರಣಗಳು ಸಿಗದೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾಲಬಾಧೆ ಹಾಗೂ ನಷ್ಟದಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ಸರ್ಕಾರದ ಕ್ರಮಗಳೇನು?
ಕೃಷಿ ಸಚಿವರ ಉತ್ತರ: ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ‘ಡಿಬಿಟಿ’ (ರೈತರ ಖಾತೆಗೆ ನೇರ ಹಣ/ಸಹಾಯಧನ) ಹಾಗೂ ಆನ್ಲೈನ್ ರೈತ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ರೈತರ ಆತ್ಮಹತ್ಯೆ ತಡೆಯಲು ಕೃಷಿ ಇಲಾಖೆಯಿಂದ ಉಚಿತ ಮಾನಸಿಕ ಆಪ್ತಸಮಾಲೋಚನೆ ಕೇಂದ್ರಗಳು, ಹಾಗೂ ರೈತಪರವಾದ ನೇಗಿಲ ಯೋಗಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ವಿರೋಧ ಪಕ್ಷದ ಒತ್ತಾಯ : ಸಾರಿಗೆ ಬಸ್ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಬೇಕು. ಕೇಂದ್ರ ಸರ್ಕಾರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಎಲೆಕ್ಟ್ರಿಕ್ (ಇ-ಬಸ್) ಬಸ್ಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು.
ಸಾರಿಗೆ ಸಚಿವರ ಉತ್ತರ: ರಾಜ್ಯ ಸಾರಿಗೆ ಸಂಸ್ಥೆಗಳನ್ನು ನಷ್ಟದಿಂದ ಹೊರತರಲು ಹಾಗೂ ಪರಿಸರ ಮಾಲಿನ್ಯ ತಡೆಯಲು ಇ-ಬಸ್ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ 'ಪಿಎಂ ಇ-ಬಸ್ ಸೇವಾ' ಯೋಜನೆಯಡಿ ಹಂತ ವಾಗಿ ಸಾವಿರಾರು ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ. ಹಾಗೂ ಸಾಕಷ್ಟು ಡೀಸೆಲ್ ಬಸ್ಗಳು ಸಹ ಕಾರ್ಯಾಚರಣೆ ಮಾಡುತ್ತಿವೆ.
ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರು ವಿಶೇಷವಾಗಿ, ಮಲೆನಾಡಿನ ಜನಜೀವನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ 'ಕಸ್ತೂರಿ ರಂಗನ್ ವರದಿ'ಯ ಸಾಧಕ-ಬಾಧಕಗಳ ಕುರಿತು ಸದನದಲ್ಲಿ ದೀರ್ಘವಾದ ಚರ್ಚೆ ನಡೆಸಿದರು. ಪರಿಸರವನ್ನು ಉಳಿಸುತ್ತಲೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದರೊಂದಿಗೆ, ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಮಂಡಿಸಿ ಚರ್ಚಿಸಲಾಯಿತು. ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಠಿಣವಾಗಿ ಹತ್ತಿಕ್ಕಲು 'ಮಹಿಳಾ ದೌರ್ಜನ್ಯ ತಡೆ ಮಸೂದೆ'ಯನ್ನು ಹಾಗೂ ಯುವಜನತೆಯನ್ನು ಬಾಧಿಸುತ್ತಿರುವ ಪಿಡುಗಾದ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು 'ಮಾದಕ ವಸ್ತುಗಳ ನಿಯಂತ್ರಣ ಮಸೂದೆ'ಯನ್ನು ಮಂಡಿಸಿ ಕೂಲಂಕಷವಾಗಿ ಚರ್ಚೆ ನಡೆಸಲಾಯಿತು.
ಸದನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಉಳಿದ ಭರವಸೆಗಳು ಏನಾದವು? ಕೇವಲ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ನಷ್ಟಕ್ಕೆ ಸಿಲುಕಿದೆಯೇ? ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಳ್ಳುತ್ತಿವೆಯೇ?
ಮುಖ್ಯಮಂತ್ರಿಗಳ ಉತ್ತರ: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿಲ್ಲ. ಗ್ಯಾರಂಟಿ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿವೆ. ರಾಜ್ಯದ ಜಿಎಸ್ಡಿಪಿ ಪ್ರಗತಿಯಲ್ಲಿದ್ದು, ತೆರಿಗೆ ಸಂಗ್ರಹದಲ್ಲೂ ಉತ್ತಮ ಬೆಳವಣಿಗೆಯಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಬಜೆಟ್ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಾಗಿದ್ದು, ಆರ್ಥಿಕತೆ ಸುಸ್ಥಿರವಾಗಿದೆ.
ಸದನದಲ್ಲಿ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ ಬಹಳಷ್ಟು ಆಕಾಂಕ್ಷೆಗಳನ್ನಿಟ್ಟುಕೊಂಡು ಸದನಕ್ಕೆ ಬಂದಿದ್ದು ಶೂನ್ಯ ವೇಲೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ವೇದಿಕೆಯಾಗಿದೆ ಎಂದರು.
ಶೂನ್ಯ ಅವಧಿ ಎಂದರೆ ಸಂಸತ್ ಅಥವಾ ವಿಧಾನಮಂಡಲದ ಕಲಾಪಗಳಲ್ಲಿ ಯಾವುದೇ ಮುಂಗಡ ಸೂಚನೆ ಇಲ್ಲದೆ ಸಾರ್ವಜನಿಕ ಪ್ರಾಮುಖ್ಯತೆಯ ತುರ್ತು ವಿಷಯಗಳನ್ನು ಪ್ರಸ್ತಾಪಿಸಲು ನೀಡಿರುವ ವಿಶೇಷ ಸಮಯ. ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ತಕ್ಷಣ, ಅಂದರೆ ಮಧ್ಯಾಹ್ನ 12:00 ಗಂಟೆಗೆ ಈ ಅವಧಿ ಪ್ರಾರಂಭವಾಗುತ್ತದೆ. ದೇಶದ ಅಥವಾ ಕ್ಷೇತ್ರದ ತಕ್ಷಣದ ಗಮನ ಸೆಳೆಯಬೇಕಾದ ತುರ್ತು ಸಮಸ್ಯೆಗಳ ಬಗ್ಗೆ ಸಂಸದರು ಅಥವಾ ಶಾಸಕರು ಸರ್ಕಾರದ ಗಮನ ಸೆಳೆಯಲು ಇದು ಅವಕಾಶ ನೀಡುತ್ತದೆ ಎಂದರು.

Leave a Comment