ಶಿವಮೊಗ್ಗದ ಇಬ್ಬರು ಸ್ಕೇಟಿಂಗ್ ಕ್ರೀಡಾಪಟುಗಳ ಸಾಧನೆಸೈಯದ್ ಪೈಜಲ್‌ಗೆ ಎರಡು ಚಿನ್ನ, ಒಂದು ಬೆಳ್ಳಿ; ರಾಷ್ಟ್ರಮಟ್ಟಕ್ಕೆ ಆಯ್ಕೆ
ಶಿವಮೊಗ್ಗ, ಅ. 31: ಶಿವಮೊಗ್ಗದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಕ್ರೀಡಾಪಟುಗಳು ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ 14ರಿಂದ 17 ವರ್ಷ ವಯೋಮಿತಿಯ ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾಕೂಟದಲ್ಲಿ ಶಿವಮೊಗ್ಗದ ಕೋಟೆಗಂಗೂರಿನ ಲಕ್ಷ್ಯ ಶಾಲೆಯ ವಿದ್ಯಾರ್ಥಿ ಸೈಯದ್ ಪೈಜಲ್ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ರೋಡ್ ಮತ್ತು ರಿಂಕ್ ರೇಸ್ ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದೇ ಕ್ರೀಡಾಕೂಟದಲ್ಲಿ ವಿಕಾಸ ಶಾಲೆಯ ವಿದ್ಯಾರ್ಥಿನಿ ನಿಖಿತಾ ಎಸ್. ಉಪಾಧ್ಯ ಅವರು ಬೆಳ್ಳಿ ಪದಕ ಗಳಿಸಿ ಶಿವಮೊಗ್ಗದ ಕ್ರೀಡಾ ಕ್ಷೇತ್ರದ ಗೌರವ ಹೆಚ್ಚಿಸಿದ್ದಾರೆ.
ಶಿವಮೊಗ್ಗದ ಗೋಪಾಳದಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ಸಂಸ್ಥೆಯ ತರಬೇತುದಾರರಾದ ವಿಶ್ವಾಸ್ ಹಾಗೂ ಅತಿಶ್ ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷ ಗಜೇಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸ್ಕೇಟಿಂಗ್ ಸಮಿತಿಯ ಸಹಕಾರ್ಯದರ್ಶಿ ಎಂ. ರವಿ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ಈ. ವಿಶ್ವಾಸ್ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸೈಯದ್ ಪೈಜಲ್ ಅವರಿಗೆ ಶಿವಮೊಗ್ಗದ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿಗಳು, ಅನುದಾನರಹಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ ಹಾಗೂ ಸಂಘದ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
ಶಿವಮೊಗ್ಗದ ಯುವ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ತೋರಿರುವ ಈ ಸಾಧನೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಮತ್ತಷ್ಟು ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

Leave a Comment