ಶಿಕಾರಿಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಅಕ್ರಮ ಗೋ ಸಾಗಾಣಿಕೆ ಖಂಡಿಸಿ ಪ್ರತಿಭಟನೆ
ಶಿಕಾರಿಪುರ: ಅಕ್ರಮ ಗೋ ಸಾಗಾಣಿಕೆ ಹಾಗೂ ಬಜರಂಗದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ಶಿಕಾರಿಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು (ಆ.19) ಬೆಳಗ್ಗೆಯಿಂದಲೇ ಶಿಕಾರಿಪುರ ಪಟ್ಟಣದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ ವರ್ತಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಖಾಸಗಿ ಬಸ್ ನಿಲ್ದಾಣದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
ಪ್ರತಿಭಟನೆ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಪೊಲೀಸರಿಗೆ ಮನವಿ ಮಾಡಿದ್ದು, ಗೋ ಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಬೇಕಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
“ಅವತ್ತು ಗೋವನ್ನು ಎತ್ತಿಕೊಂಡು ಬಂದಂತಹ ಕಳ್ಳರನ್ನು ಕೆಲವರು ಅರೆಸ್ಟ್ ಮಾಡಿದ್ದು ಒಂದು ವಿಚಾರ. ಇನ್ನೊಂದು, ಇಲ್ಲಿ ಫೋನ್ ಮಾಡಿ ಕೆಲಸಕ್ಕೆ ಬಾರದ ಕೆಲವು ವ್ಯಕ್ತಿಗಳನ್ನು ಕರೆಸಿಕೊಳ್ಳುವಂತಹ ಕೆಲಸ ಮಾಡಿದ್ದಾರೆ. ಅವರನ್ನು ಇನ್ನೂ ಅರೆಸ್ಟ್ ಮಾಡಲು ಆಗಿಲ್ಲ. ಊರು ಬಿಟ್ಟು ಹೋಗಿದ್ದಾರೆ. ಎಲ್ಲೋ ಹೋಗಿ ನಾಳೆ ಜಾಮೀನು ಪಡೆದು ಬರುತ್ತಾರೆ.
ಅವರು ಯಾವಾಗ ಕಾನೂನಿನ ಕ್ರಮವನ್ನು ಎದುರಿಸಬೇಕು? ದಯವಿಟ್ಟು ಅವರನ್ನು ಬೇಗ ಅರೆಸ್ಟ್ ಮಾಡಬೇಕು. ಇಲ್ಲದಿದ್ದರೆ ಯಾರಿಗೂ ಗೌರವ ಬರುವುದಿಲ್ಲ. ಇಲಾಖೆಗೆ ಕೂಡ ಇದು ಪ್ರಶ್ನೆಯಾಗುತ್ತದೆ. ಆದ್ದರಿಂದ ಬೇಗ ಅರೆಸ್ಟ್ ಮಾಡಿ, ಬೇಗ ಆಕ್ಷನ್ ತೆಗೆದುಕೊಳ್ಳಬೇಕು,” ಎಂದು ಸಂಸದ ರಾಘವೇಂದ್ರ ಅವರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ “ಭಾರತ್ ಮಾತಾ ಕೀ ಜೈ” ಘೋಷಣೆ ಮೊಳಗಿದ್ದು, ಗೋ ಕಳ್ಳತನ ಆರೋಪಿಗಳನ್ನು ಬಂಧಿಸದ ರಾಜ್ಯ ಸರ್ಕಾರದ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಿಕಾರಿಪುರ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮುಂದುವರಿಸಿದ್ದಾರೆ.

Leave a Comment