ಅನಧಿಕೃತ ಬಡಾವಣೆಯಲ್ಲಿ 22 ನಿವೇಶನಗಳಿಗೆ ನಕಲಿ e-PID ಸೃಷ್ಟಿಸಿ ಖಾತೆ: ಭ್ರಷ್ಟಾಚಾರದ ಆರೋಪ, ಕಠಿಣ ಕ್ರಮಕ್ಕೆ ಆಗ್ರಹ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಚೂಡೇನಪುರ (ಕೋಡಿಪಾಳ್ಯ) ಗ್ರಾಮದ ಸರ್ವೆ ನಂಬರ್ 3/4ರಲ್ಲಿ ಯಾವುದೇ ಯೋಜನಾ ಪ್ರಾಧಿಕಾರದ ಅನುಮೋದನೆ ಹಾಗೂ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಎನ್ನಲಾದ ಅನಧಿಕೃತ ಬಡಾವಣೆಯಲ್ಲಿ 22 ನಿವೇಶನಗಳಿಗೆ ಕಾನೂನುಬಾಹಿರವಾಗಿ ಹೊಸ e-PID ಸಂಖ್ಯೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಚಿಕ್ಕಮ್ಮ W/o ನಾರಾಯಣಪ್ಪ ಅವರ ಹೆಸರಿನಲ್ಲಿದ್ದ 34 ಗುಂಟೆ ವ್ಯವಸಾಯ ಜಮೀನಿನಲ್ಲಿ 24.08 ಗುಂಟೆಯನ್ನು ಎನ್. ದೇವರಾಜು ಅವರಿಗೆ 10-04-2019ರಂದು ಹಾಗೂ 9.08 ಗುಂಟೆಯನ್ನು ಕೆ.ಎನ್. ಪ್ರಸನ್ನ ಅವರಿಗೆ 04-10-2019ರಂದು ದಾನಪತ್ರದ ಮೂಲಕ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಜಮೀನಿನಲ್ಲಿ ಯಾವುದೇ ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪಡೆಯದೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೆ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಈ ಅನಧಿಕೃತ ಬಡಾವಣೆಯ 22 ನಿವೇಶನಗಳಿಗೆ 2026ರ ಜನವರಿಯಿಂದ ಜೂನ್‌ವರೆಗೆ ಹೊಸ e-PIDಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಸ್ಕ್ಯಾನ್ ಮಾಡಲಾಗಿರುವ ಖಾತಾ ಪುಸ್ತಕದಲ್ಲಿ ಖಾಲಿ ಇರುವ ಸಂಖ್ಯೆಗಳನ್ನೇ ಬಳಸಿಕೊಂಡು ಹೊಸ e-PIDಗಳನ್ನು ಸೃಷ್ಟಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅನಧಿಕೃತ ಬಡಾವಣೆಯಲ್ಲಿ ಮಾಡಲಾಗಿರುವ ಖಾತೆಗಳನ್ನು ತಕ್ಷಣ ರದ್ದುಪಡಿಸುವುದು ಸೇರಿದಂತೆ, ಅಕ್ರಮವಾಗಿ e-PID ಸೃಷ್ಟಿಸಿ ಖಾತೆ ವರ್ಗಾವಣೆ ಮಾಡಿಕೊಟ್ಟಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಇಲಾಖಾ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂಬಂಧ ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ರಮೇಶ್ ರಾಥೋಡ್, ರಂಗಸ್ವಾಮಿ, ದ್ವಿತೀಯ ದರ್ಜೆ ಗುಮಾಸ್ತೆ ನಿಖಿತಾ ಹಾಗೂ ಗಣಕಯಂತ್ರ ನಿರ್ವಾಹಕಿ ಲಕ್ಷ್ಮಿ ಅವರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತದ ಐಜಿಪಿ ಅವರಿಗೂ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಹಾಗೆಯೇ, ಸಂಪೂರ್ಣ ದಾಖಲೆಗಳೊಂದಿಗೆ GBA ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಈ ಕುರಿತು ಮಾಜಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್. ಅವರು ದೂರು ಸಲ್ಲಿಸಿದ್ದು, ಪಾಲಿಕೆಗೆ ಉಂಟಾಗಿರುವ ಎನ್ನಲಾದ ಆರ್ಥಿಕ ನಷ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೂಚನೆ: ಮೇಲಿನ ಆರೋಪಗಳು ದೂರುದಾರರು ಮಾಡಿರುವ ಆರೋಪಗಳಾಗಿದ್ದು, ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ದೃಢಪಡಬೇಕಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.