🔴 ಕಸ್ತೂರಿರಂಗನ್ ವರದಿ ಜಾರಿಗೆ ಮುನ್ನ ಸಮಗ್ರ ಜಂಟಿ ಸರ್ವೆ ನಡೆಸಿ: ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚಿಕೆ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತಕ್ಷಣ ಸಮಗ್ರ ಜಂಟಿ ಸರ್ವೆ ನಡೆಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯ ಜೊತೆಗೆ ರೈತರು ಮತ್ತು ಗ್ರಾಮೀಣ ಜನರ ಹಿತವನ್ನೂ ಕಾಪಾಡಬೇಕು ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಭೂಮಿ ಮತ್ತು ಕೃಷಿ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಬರುವ ಆತಂಕವಿದೆ. ಈಗಾಗಲೇ ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಹಲವು ಕಾನೂನುಗಳು ಜಾರಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ನಿಯಂತ್ರಣ ವ್ಯವಸ್ಥೆ ಜಾರಿಯಾದರೆ ಜನಜೀವನಕ್ಕೆ ತೊಂದರೆಯಾಗಬಹುದು ಎಂದು ರಾಘವೇಂದ್ರ ಹೇಳಿದರು.
🟠 1,439 ಗ್ರಾಮಗಳ ಜನರಲ್ಲಿ ಆತಂಕ

ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 1,439 ಗ್ರಾಮಗಳು ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ರೈತರು ಮತ್ತು ಗ್ರಾಮೀಣ ಜನರಲ್ಲಿ ಆತಂಕ ಮೂಡಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಬಗರ್ ಹುಕುಂ, ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ ಹಾಗೂ ಮುಳುಗಡೆ ಸಂತ್ರಸ್ತರ ಭೂಮಿ ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ಹೀಗಾಗಿ ಹೊಸ ನಿಯಂತ್ರಣ ವ್ಯವಸ್ಥೆ ಜಾರಿಗೂ ಮುನ್ನ ವಾಸ್ತವ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
🟢 ‘ಶೂನ್ಯ ಬಫರ್ ಝೋನ್’ಗೆ ಒತ್ತಾಯ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೈಸರ್ಗಿಕ ಭೂದೃಶ್ಯ ಮತ್ತು ಕೃಷಿ ಹಾಗೂ ಮಾನವ ವಸತಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ರಾಘವೇಂದ್ರ ಒತ್ತಾಯಿಸಿದರು.
ಅಡಿಕೆ, ಕಾಫಿ, ಕಾಳುಮೆಣಸು, ರಬ್ಬರ್, ಶುಂಠಿ ಸೇರಿದಂತೆ ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಜಮೀನುಗಳನ್ನು ಅರಣ್ಯ ಪ್ರದೇಶದೊಂದಿಗೆ ಸಮಾನವಾಗಿ ಪರಿಗಣಿಸಬಾರದು ಎಂದರು.
ಈಗಾಗಲೇ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮ ಹಾಗೂ ಮೀಸಲು ಅರಣ್ಯಗಳಂತಹ ಕಾನೂನು ರಕ್ಷಣೆಯಲ್ಲಿರುವ ಪ್ರದೇಶಗಳನ್ನು ಮಾತ್ರ ಪರಿಗಣಿಸಬೇಕು. ಯಾವುದೇ ಗ್ರಾಮ ಅಥವಾ ರೈತರ ಕೃಷಿ ಭೂಮಿಯನ್ನು ಹೊಸದಾಗಿ ESA ವ್ಯಾಪ್ತಿಗೆ ಸೇರಿಸಬಾರದು. ಬಫರ್ ಝೋನ್ ವಿಚಾರದಲ್ಲಿ ಶೂನ್ಯ ಬಫರ್ ಝೋನ್ ಇರಬೇಕು ಎಂದು ಅವರು ಸ್ಪಷ್ಟಪಡಿಸಿದರು.

🔵 ರೈತರ ಕೃಷಿಗೆ ರಕ್ಷಣೆ ನೀಡಬೇಕು

ಕಸ್ತೂರಿರಂಗನ್ ವರದಿ ಜಾರಿಯಾದರೆ ಭೂ ಬಳಕೆ, ನಿರ್ಮಾಣ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಯಾವ ರೀತಿಯ ನಿರ್ಬಂಧಗಳು ಬರಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯವಿದೆ.
ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಸೂಚನೆಯಲ್ಲಿ ಸ್ಪಷ್ಟ ಭರವಸೆ ನೀಡಬೇಕು ಎಂದು ರಾಘವೇಂದ್ರ ಹೇಳಿದರು.
🟡 ವಿಶೇಷ ಅಧಿವೇಶನಕ್ಕೂ ಮುನ್ನ ಜಂಟಿ ಸರ್ವೆ

ಕಸ್ತೂರಿರಂಗನ್ ವರದಿ ಕುರಿತು ಒಂದು ದಿನದ ವಿಶೇಷ ಅಧಿವೇಶನ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಇದನ್ನು ಸ್ವಾಗತಿಸುವುದಾಗಿ ತಿಳಿಸಿದ ರಾಘವೇಂದ್ರ, ವಿಶೇಷ ಅಧಿವೇಶನಕ್ಕೂ ಮುನ್ನವೇ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸರ್ವೆ ಮೂಲಕ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳ ವಾಸ್ತವಿಕ ಸ್ಥಿತಿಯನ್ನು ಗುರುತಿಸಿ, ರೈತರ ಪರವಾದ ಸ್ಪಷ್ಟ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
“ಪರಿಸರ ಸಂರಕ್ಷಣೆ ಅಗತ್ಯ. ಆದರೆ ಪರಿಸರದ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗಬಾರದು. ಈಗಾಗಲೇ ಕಾನೂನು ರಕ್ಷಣೆಯಲ್ಲಿರುವ ಅರಣ್ಯ ಪ್ರದೇಶಗಳನ್ನು ಮಾತ್ರ ಪರಿಗಣಿಸಿ, ಗ್ರಾಮಗಳು ಮತ್ತು ಕೃಷಿ ಭೂಮಿಯನ್ನು ಹೊಸದಾಗಿ ESA ವ್ಯಾಪ್ತಿಗೆ ಸೇರಿಸಬಾರದು” ಎಂದು ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಭಾರಿಗಳಾದ ಸಿದ್ಧರಾಮಣ್ಣ, ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೀಶ್ ಎನ್.ಕೆ, ಶಾಸಕ ಚನ್ನಬಸಪ್ಪ, ಮಾಜಿ ಶಾಸಕರಾದ ಅಶೋಕ್ ನಾಯಕ್ ಹಾಗೂ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಜಿಲ್ಲಾ ವಕ್ತಾರರಾದ ಎಸ್‌. ಎಸ್. ಜ್ಯೋತಿ ಪ್ರಕಾಶ್, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ,  ಗ್ರಾಮಾಂತರ ಅಧ್ಯಕ್ಷರಾದ ಸಿಂಗನಹಳ್ಳಿ ಸುರೇಶ್, ದಿಶಾ ಸಮಿತಿ ಸದಸ್ಯರಾದ ಗಿರೀಶ್ ಭದ್ರಾಪುರ,  ಜಿಲ್ಹಾ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಹರೀಶ್ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್, ಮಂಜುನಾಥ್ ಎನ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.