ಶಿವಮೊಗ್ಗದಿಂದ ಆಂಧ್ರಪ್ರದೇಶಕ್ಕೆ ವಿಶೇಷ ರೈಲು- ಬಿ.ವೈ. ರಾಘವೇಂದ್ರ ಪ್ರಯತ್ನಕ್ಕೆ ಫಲ:ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ
ಶಿವಮೊಗ್ಗದಿಂದ ಆಂಧ್ರಪ್ರದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ ಎಂದು ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ–ಮಚಿಲಿಪಟ್ಟಣಂ ಹಾಗೂ ಶಿವಮೊಗ್ಗ–ಗುಂತಕಲ್ ನಡುವೆ ವಿಶೇಷ ರೈಲುಗಳ ಸಂಚಾರ ಆರಂಭವಾಗುತ್ತಿರುವುದು ಮಲೆನಾಡಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗದಿಂದ ಆಂಧ್ರಪ್ರದೇಶದ ವಿವಿಧ ನಗರಗಳಿಗೆ ತೆರಳುವ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂಸದ ಬಿ.ವೈ. ರಾಘವೇಂದ್ರ ಅವರು ರೈಲ್ವೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಿ, ರೈಲು ಸೇವೆ ಕಲ್ಪಿಸಲು ಪ್ರಯತ್ನ ನಡೆಸಿದ್ದರು. ಇದೀಗ ಅವರ ಪ್ರಯತ್ನಕ್ಕೆ ಫಲ ದೊರೆತಿದೆ ಎಂದು ತಿಳಿಸಿದರು.
ಈ ವಿಶೇಷ ರೈಲುಗಳಿಗೆ ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದ್ದು, ಆಂಧ್ರಪ್ರದೇಶದ ಹಲವು ಪ್ರಮುಖ ಪ್ರದೇಶಗಳ ಪ್ರಯಾಣಿಕರಿಗೂ ಇದರ ಪ್ರಯೋಜನ ದೊರೆಯಲಿದೆ.

Leave a Comment