ಮಂಡ್ಲಿ ವೃತ್ತದಲ್ಲಿ ಭೀಕರ ರಸ್ತೆ ಅಪಘಾತ – ಬೈಕ್ ಸವಾರ ಅರ್ಜುನ್ ಸಾವು!
ಶಿವಮೊಗ್ಗ: ನಗರದ ಮಂಡ್ಲಿ ವೃತ್ತದ ಗಜಾನನ ಗ್ಯಾರೇಜ್ ಬಳಿ ಗುರುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಅರ್ಜುನ್ ಎಂದು ಗುರುತಿಸಲಾಗಿದೆ. ಅವರು ನಗರದ ಪತ್ರಿಕಾ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಹರಕೆರೆ ಭಾಗದಲ್ಲಿರುವ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರಾತ್ರಿ ಸುಮಾರು 11.30ರ ವೇಳೆಗೆ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಪಘಾತಕ್ಕೆ ಕಾರಣವಾದ ಕಾರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗದತ್ತ ಬರುತ್ತಿತ್ತು ಎನ್ನಲಾಗಿದ್ದು, ಕಾರಿನಲ್ಲಿ ಆರು ಮಂದಿ ಇದ್ದರು ಎಂಬ ಮಾಹಿತಿಯೂ ವರದಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಚಾಲಕರ ನಿರ್ಲಕ್ಷ್ಯದ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣವು ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ಮತ್ತು ದುಃಖ ಮನೆಮಾಡಿದೆ.

Leave a Comment