ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ರೈತರ ಬೃಹತ್ ಪ್ರತಿಭಟನೆ

ಸಾಗರ: ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ವಿರೋಧಿಸಿ ಗುರುವಾರ ಜಿಲ್ಲಾ ರೈತ ಸಂಘದ ವತಿಯಿಂದ ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಹೆಸರಿನಲ್ಲಿ ಮಲೆನಾಡು ರೈತರ ಬದುಕಿಗೆ ಕೊಳ್ಳಿ ಇಡುವುದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 20,668 ಎಕರೆ ಪ್ರದೇಶ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರಲಿದ್ದು, 1,449 ಹಳ್ಳಿಗಳು ಇದರ ವ್ಯಾಪ್ತಿಗೆ ಸೇರುತ್ತಿವೆ. ಶಿವಮೊಗ್ಗ ಜಿಲ್ಲೆಯ 449 ಹಳ್ಳಿಗಳು ಒಳಪಡಲಿವೆ ಎಂದು ಅವರು ಹೇಳಿದರು. ಮಲೆನಾಡು ಭಾಗದ ರೈತರು ಈ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು ಎಂದು ಕರೆ ನೀಡಿದರು.
ಕೇರಳದಲ್ಲಿ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ಸರ್ಕಾರಿ ನೌಕರರು ಒಗ್ಗಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಿದ್ದರಿಂದ ಪರಿಷ್ಕೃತ ವರದಿ ಜಾರಿಯಾಗಿತ್ತು. ಕರ್ನಾಟಕದಲ್ಲೂ ಎಲ್ಲರೂ ಪಕ್ಷಬೇಧ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.

ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿ ವಿಶೇಷ ಅಧಿವೇಶನ ಕರೆಯುವುದಾಗಿ ಹೇಳಿರುವುದನ್ನು ಸ್ವಾಗತಿಸಿದ ಹಾಲಪ್ಪ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದರ ಜೊತೆಗೆ ಜನವಸತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವ ಭೂಮಿಯನ್ನು ಹೊರಗಿಟ್ಟು ಮತ್ತೊಮ್ಮೆ ದೈಹಿಕ ಸಮೀಕ್ಷೆ ನಡೆಸಬೇಕು. ಇದರಿಂದ ಮಲೆನಾಡು ರೈತರ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜಿಲ್ಲೆಗೆ ಶಾಪವಾಗಲಿದೆ. ವರದಿ ಯಥಾವತ್ತಾಗಿ ಜಾರಿಯಾದರೆ ಮಲೆನಾಡು ಜನರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.

ಪಕ್ಷಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ವರದಿಯಿಂದ ಮುಕ್ತಿ ಪಡೆಯಲು ಸಾಧ್ಯ. ಗ್ರಾಮೀಣ ಅಭಿವೃದ್ಧಿಗೆ ಅಡ್ಡಿಯಾಗುವ ಈ ವರದಿಯ ಬಗ್ಗೆ ಸರ್ಕಾರ ಗಂಭೀರವಾಗಿ ಪುನರ್ ಪರಿಶೀಲನೆ ನಡೆಸಬೇಕು. ಜನವಸತಿ ಪ್ರದೇಶಗಳನ್ನು ಹೊರಗಿಟ್ಟು ದೈಹಿಕ ಸಮೀಕ್ಷೆ ನಡೆಸಿ ಹೊಸ ವರದಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ರ‍್ಯಾಲಿಗೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಹಕ್ರೆ, ಟಿ.ಡಿ. ಮೇಘರಾಜ್, ಚೇತನರಾಜ ಕಣ್ಣೂರು ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಬ್ಯಾರಿಕೇಡ್ ಕಿತ್ತೆಸೆದ ರೈತರು
ಪ್ರತಿಭಟನಾ ಮೆರವಣಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಬಾಗಿಲಿಗೆ ಬರದಂತೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿತ್ತು. ಇದರಿಂದ ಆಕ್ರೋಶಗೊಂಡ ರೈತರು ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ ನಡೆಸಿದರು.

ರೈತರನ್ನು ಬ್ಯಾರಿಕೇಡ್ ಹಾಕಿ ಅವಮಾನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೊಲೀಸ್ ಇಲಾಖೆಯ ಧೋರಣೆಯನ್ನು ಖಂಡಿಸಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಕೂಡ ಪೊಲೀಸ್ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಪ್ರಸನ್ನ ಕೆರೆಕೈ, ಸೋಮಶೇಖರ್, ಸಂತೋಷ್ ಚಿಕ್ಕನೆಲ್ಲೂರು, ಸುನೀಲ್, ಚಂದ್ರು ಪೂಜಾರಿ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.