ಗಾಂಧಿ ಪಾರ್ಕ್ ಅಭಿವೃದ್ಧಿಗೆ ಶಾಸಕರ ಕಟ್ಟುನಿಟ್ಟಿನ ಸೂಚನೆ

ಶಿವಮೊಗ್ಗ: ನಗರದ ಪ್ರಮುಖ ಸಾರ್ವಜನಿಕ ವಿಶ್ರಾಂತಿ ತಾಣವಾದ ಗಾಂಧಿ ಪಾರ್ಕ್‌ನ ಈಜುಕೊಳ, ಫೌಂಟೆನ್, ಮಕ್ಕಳ ರೈಲು ಸೇರಿದಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ಕಲ್ಪಿಸುವಂತೆ ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ ಶಾಸಕರು, ಹಲವು ದಿನಗಳಿಂದ ಅರ್ಧಕ್ಕೆ ನಿಂತಿರುವ ಹಾಗೂ ದುರಸ್ತಿಗೆ ಒಳಗಾಗಬೇಕಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಅರ್ಧಕ್ಕೆ ಸ್ಥಗಿತಗೊಂಡಿರುವ ಫೌಂಟೆನ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಪಾರ್ಕ್‌ನ ಸೌಂದರ್ಯ ಹೆಚ್ಚಿಸುವಂತೆ ಸೂಚಿಸಿದರು. ಸಾರ್ವಜನಿಕರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಪಾರ್ಕ್‌ನ ಈಜುಕೊಳವನ್ನು ಸಾರ್ವಜನಿಕರ ಸದ್ಬಳಕೆಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ ಮಕ್ಕಳ ರೈಲನ್ನು ದುರಸ್ತಿಗೊಳಿಸುವುದರ ಜೊತೆಗೆ ಹಾಳಾಗಿರುವ ಆಟಿಕೆಗಳನ್ನು ಬದಲಾಯಿಸುವಂತೆ ಸೂಚಿಸಿದರು. ಈಗಾಗಲೇ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದರು.
ಇದರ ಜೊತೆಗೆ ಪಾರ್ಕ್‌ನಲ್ಲಿರುವ ಕೊಳವನ್ನು ಸ್ವಚ್ಛಗೊಳಿಸಿ ನವೀಕರಿಸುವಂತೆ ತಿಳಿಸಿದ ಶಾಸಕರು, ಪಾರ್ಕ್‌ನ ಸರ್ವಾಂಗೀಣ ಅಭಿವೃದ್ಧಿ ಮತ್ತು ಸ್ವಚ್ಛತಾ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೆ, ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಭಾಕರ್, ಪಾಲಿಕೆಯ ಹಿರಿಯ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹಲೋ ಶಿವಮೊಗ್ಗ – ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ, Like ಮತ್ತು Share ಮಾಡಿ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.