ಹರಕೆರೆ ರಿಂಗ್ ರೋಡ್‌ನಲ್ಲಿ ದರೋಡೆ:ಮೂವರು ಬಂಧನ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಕೆರೆ ರಿಂಗ್ ರೋಡ್ ರಸ್ತೆಯಲ್ಲಿ ಇಬ್ಬರು ಸಾರ್ವಜನಿಕರನ್ನು ಹೆದರಿಸಿ, ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನ್ (24), ಮೊಹಮ್ಮದ್ ಶೆಹಜಾನ್ (22) ಹಾಗೂ ಹೇಮಂತ ಎಸ್.ಎ (21) ಎಂಬುವವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳು ಕಾರಿನಲ್ಲಿ ಬಂದು ಇಬ್ಬರು ಸಾರ್ವಜನಿಕರನ್ನು ಹೆದರಿಸಿ ಹಾಗೂ ಹಲ್ಲೆ ನಡೆಸಿ ಅವರ ಬಳಿಯಿದ್ದ ಹಣ ಮತ್ತು ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗಿದ್ದರು ಎನ್ನಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 544/2026, ಕಲಂ 309(6) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಹಾಗೂ ಕಳುವಾದ ಮಾಲು ವಶಪಡಿಸಿಕೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜೆ. ಕಾರಿಯಪ್ಪ ಹಾಗೂ ಶಿವಮೊಗ್ಗ–ಎ ಉಪವಿಭಾಗದ ಡಿವೈಎಸ್‌ಪಿ ತೀಲವಂತ ಎಸ್.ಹೆಚ್. ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಗುರುರಾಜ್ ಕೆ.ಟಿ. ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ಗಾದಿಲಿಂಗಪ್ಪ ಗೌಡರ್ ಮತ್ತು ರಘುವೀರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ಆರೋಪಿಗಳಿಂದ ಸಾರ್ವಜನಿಕರಿಂದ ಕಿತ್ತುಕೊಂಡಿದ್ದ ₹30,500 ನಗದು, 2 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ.
ಪ್ರಕರಣದ ಕುರಿತು ತುಂಗಾನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment