ಅನಾವರಣಗೊಳ್ಳದ ಅಂಬೇಡ್ಕರ್ ಪ್ರತಿಮೆ: ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕರ ಆಕ್ರೋಶ
ಚನ್ನರಾಯಪಟ್ಟಣ: ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಬರೋಬ್ಬರಿ 10 ತಿಂಗಳು ಕಳೆದರೂ ಸಾರ್ವಜನಿಕ ದರ್ಶನಕ್ಕೆ ಅನಾವರಣಗೊಳಿಸಿಲ್ಲ ಎಂಬ ಆರೋಪ ಚನ್ನರಾಯಪಟ್ಟಣದಲ್ಲಿ ಕೇಳಿಬಂದಿದೆ.
ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿ, ಮಿನಿ ವಿಧಾನಸೌಧದ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಪ್ರತಿಮೆಯನ್ನು ತರಿಸಿ, ಸಾವಿರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಆವರಣಕ್ಕೆ ತರಲಾಗಿತ್ತು ಎನ್ನಲಾಗಿದೆ.
ಆದರೆ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಅದನ್ನು ಟಾರ್ಪಲ್‌ನಿಂದ ಮುಚ್ಚಲಾಗಿದ್ದು, ಹತ್ತು ತಿಂಗಳು ಕಳೆದರೂ ಅಧಿಕೃತವಾಗಿ ಅನಾವರಣಗೊಳಿಸದೆ ಇರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ತಾಲೂಕಿನ ಸರ್ವ ಜನಾಂಗದ ಜನರು, ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಅನಾವರಣಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪ್ರತಿಮೆ ನಿರ್ಮಾಣ ಹಾಗೂ ಸ್ಥಾಪನೆಗೆ ತೋರಿದ ಆಸಕ್ತಿಯನ್ನು ಅನಾವರಣಗೊಳಿಸುವ ವಿಚಾರದಲ್ಲಿ ತೋರಿಸಲಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಇನ್ನು, ಪ್ರತಿಮೆಯನ್ನು ಮುಚ್ಚಿರುವ ಟಾರ್ಪಲ್‌ಗಳು ಗಾಳಿ, ಮಳೆ ಹಾಗೂ ಬಿಸಿಲಿನಿಂದ ಹರಿದುಹೋಗಿದ್ದು, ಪ್ರತಿಮೆ ಭಾಗಶಃ ಗೋಚರಿಸುವಂತಾಗಿದೆ. ಇದರಿಂದ ಸಂವಿಧಾನ ಶಿಲ್ಪಿಗೆ ನೀಡುತ್ತಿರುವ ಗೌರವ ಇದೇನಾ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಎತ್ತುತ್ತಿದ್ದಾರೆ.
ಪ್ರತಿಮೆ ಸ್ಥಾಪನೆಗಾಗಿ ಹಿಂದೆ ಹೋರಾಟ ನಡೆಸಿದ್ದ ಸಂಘಟನೆಗಳ ಮುಖಂಡರು ಇದೀಗ ಅನಾವರಣಕ್ಕಾಗಿ ಒತ್ತಾಯಿಸಿ ಹೋರಾಟ ನಡೆಸದಿರುವುದಕ್ಕೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಕಾರಣಗಳಿಂದ ಅಂಬೇಡ್ಕರ್ ಪ್ರತಿಮೆ ಅನಾವರಣ ವಿಳಂಬವಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿದ್ದು, ಈ ಕುರಿತು ತಾಲೂಕು ಆಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅಂತಹ ಮಹಾನ್ ನಾಯಕನ ಪ್ರತಿಮೆಯನ್ನು ಇಷ್ಟು ದಿನ ಮುಚ್ಚಿಟ್ಟಿರುವುದು ಸರಿಯೇ?
ಚನ್ನರಾಯಪಟ್ಟಣ ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಂಡು, ಎಲ್ಲರನ್ನೂ ಒಳಗೊಂಡಂತೆ ಸೂಕ್ತ ಸಮಾರಂಭ ಆಯೋಜಿಸಿ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಾರ್ವಜನಿಕ ದರ್ಶನಕ್ಕೆ ಅನಾವರಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹಲೋ ಶಿವಮೊಗ್ಗ – ಕರ್ನಾಟಕದ ಪ್ರಮುಖ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು Subscribe ಮಾಡಿ, Like ಮತ್ತು Share ಮಾಡಿ.

Leave a Comment