ಖರ್ಗೆ ಭಾಗವಹಿಸಿದ್ದ ಸ್ಥಳದ ಶುದ್ಧೀಕರಣ ಆರೋಪ: ದಲಿತ ಸಮುದಾಯ ಹಾಗೂ ಸಂವಿಧಾನಕ್ಕೆ ಅವಮಾನವೆಂದು ಯುವ ಕಾಂಗ್ರೆಸ್ ಖಂಡನೆ
ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಸ್ಥಳವನ್ನು ಗಂಗಾಜಲದ ಮೂಲಕ ಶುದ್ಧೀಕರಣ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಖರ್ಗೆ ಅವರು ಭಾಗವಹಿಸಿದ್ದ ಜಾಗವನ್ನು ‘ಅಶುದ್ಧ’ ಎಂದು ಪರಿಗಣಿಸಿ ಶುದ್ಧೀಕರಣ ಮಾಡಿರುವುದು ದಲಿತ ಸಮುದಾಯಕ್ಕೆ, ಸಂವಿಧಾನಿಕ ಮೌಲ್ಯಗಳಿಗೆ ಹಾಗೂ ಸಾಮಾಜಿಕ ಸಮಾನತೆಯ ಆಶಯಗಳಿಗೆ ಮಾಡಿದ ಅವಮಾನ ಎಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಜಾತೀಯತೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ತಾರತಮ್ಯವನ್ನು ಯಾವುದೇ ರೂಪದಲ್ಲೂ ಸಹಿಸಬಾರದು. ಸಂವಿಧಾನದ 17ನೇ ವಿಧಿಯಡಿ ಅಸ್ಪೃಶ್ಯತೆ ನಿಷೇಧಿಸಲಾಗಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಹೇಳಿದರು.
ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗಿವೆ. ಘಟನೆಗೆ ಕಾರಣರಾದವರನ್ನು ಗುರುತಿಸಿ, ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಆಗ್ರಹಿಸಿತು.
ಈ ಕುರಿತು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು. ಸಂವಿಧಾನದ ಮೌಲ್ಯಗಳು, ಸಾಮಾಜಿಕ ಸಮಾನತೆ ಮತ್ತು ಸಹಬಾಳ್ವೆಯನ್ನು ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷ ಶಶಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್, ಮಲಗಪ್ಪ, ಶಿವು, ಆಕಾಶ್, ಬಾಬು, ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಘಟನೆ ಕುರಿತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಯುವ ಕಾಂಗ್ರೆಸ್‌ನ ಪ್ರಮುಖ ಆಗ್ರಹವಾಗಿದೆ.

Leave a Comment