ಶಿವಮೊಗ್ಗದಲ್ಲಿ ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಚಾಲನೆ

ಶಿವಮೊಗ್ಗ, ಆಗಸ್ಟ್ 15: ಆಟೋ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಶಿವಮೊಗ್ಗ ನಗರದ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಸ್ಥಾಪಿಸಲಾಗಿರುವ ಈ ಪ್ರೀ-ಪೇಯ್ಡ್ ಕೌಂಟರ್ ಮೂಲಕ ಪ್ರಯಾಣಿಕರಿಗೆ ಪಾರದರ್ಶಕ ಹಾಗೂ ನಿಗದಿತ ದರದಲ್ಲಿ ಆಟೋ ಸೇವೆ ದೊರೆಯಲಿದೆ. ಇದರಿಂದ ಆಟೋ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಸುಗಮಗೊಳಿಸುವ ನಿರೀಕ್ಷೆ ಇದೆ.
ಪೊಲೀಸ್ ಇಲಾಖೆ, ಶಿವಮೊಗ್ಗ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಸಾರಿಗೆ ಇಲಾಖೆಯ ಸಂಯುಕ್ತ ಸಹಯೋಗದಲ್ಲಿ, ಭೀಮ ಗೋಲ್ಡ್ ಸಂಸ್ಥೆಯ ಸಹಕಾರದೊಂದಿಗೆ ಈ ಆಟೋ ಪ್ರೀ-ಪೇಯ್ಡ್ ಕೌಂಟರ್ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ., ಐಪಿಎಸ್ ಅವರು ಕೌಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾರಿಯಪ್ಪ, ಶಿವಮೊಗ್ಗ ‘ಬಿ’ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಂಜುಕುಮಾರ್, ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ದೇವರಾಜ್ ಟಿ.ವಿ., ಶ್ರೀ ಅಕ್ಬರ್ ಮುಲ್ಲಾ, ಪೂರ್ವ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಭಾರತಿ ಹಾಗೂ ಠಾಣೆಯ ಸಿಬ್ಬಂದಿ, ಭೀಮ ಗೋಲ್ಡ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಯಾಣಿಕರಿಗೆ ನಿಗದಿತ ದರದಲ್ಲಿ ಆಟೋ ಸೇವೆ ಒದಗಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಆಟೋ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.