ತಮಿಳುನಾಡಿಗೆ ಕಾವೇರಿ ನೀರು ಆದೇಶ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ:;ಕಾವೇರಿ ನದಿ ಹಳ್ಳ ಕೊಳ್ಳಗಳಲ್ಲಿ ನೀರಿಲ್ಲದಿದ್ದರೂ ಕಾವೇರಿ ಪ್ರಾಧೀಕಾರವು ತಮಿಳುನಾಡಿಗೆ  ನೀರು ಹರಿಸುವ ಆದೇಶ ಮಾಡಿರುವುದನ್ನು ವಕೀಲರು ಖಂಡಿಸಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.

     ಕೆಆರ್‌ಎಸ್ ಅಣೆಕಟ್ಟಿನಿಂದ ತಮಿಳುನಾಡಿಗೆ ೧೫ ದಿನಗಳ ಕಾಲ ೧೨ ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಮಾಡಿರುವ ಆದೇಶ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ವಕೀಲರ ಸಂಘದಿAದ ರಂಗಪ್ಪ ವೃತ್ತಕ್ಕೆ ಅಲ್ಲಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಕೇಶವಮೂರ್ತಿ ಮಾತನಾಡಿ ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲವಾದ್ದರಿಂದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದೆ ಸಂಗ್ರಹ ಕಡಿಮೆಯಾಗಿದೆ. ರಾಜ್ಯದ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನೀರಿಗೆ ಹಾಹಾಕಾರವಾಗಿದೆ. ರೈತರ ಬೆಳೆಗಳಿಗೆ ನೀರಿಲ್ಲದೆ  ಒಣಗುವಂತಾಗುತ್ತಿದೆ. ಆದರೆ ಪ್ರಾಧಿಕಾರವು ಈ ಮುಖ್ಯ ವಿಚಾರವನ್ನು ಪರಿಗಣಿಸದೆ ಮಾಡಿರುವ ಆದೇಶ ಸಂಪೂರ್ಣ  ಆವೈಜ್ಞಾನಿಕವಾಗಿದೆ. ಇದರಿಂದ ರಾಜ್ಯದ ರೈತರಿಗೆ ಮತ್ತು ಜನರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಖಂಡಿಸಿದರು.

   ಕಾರ್ಯದರ್ಶಿ ಶಿವಕುಮಾರ್ ರಾಜ್ಯ ಸರಕಾರ ಕಾನೂನು ಹೋರಾಟ ನಡೆಸಿ ರಾಜ್ಯದ ರೈತರ ಹಿತ ರಕ್ಷಿಸಬೇಕೆಂದು ಹೇಳಿ ತಹಸೀಲ್ದಾರ್ ಪ್ರದೀಪ್ ದೇವಗಿರಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ವಕೀಲರಾದ ಟಿ.ಚಂದ್ರೇಗೌಡ, ರಾಜು, ವಿ.ವೆಂಕಟೇಶ್, ಉದಯ ಕುಮಾರ್, ಕೆ.ಎನ್.ಶ್ರೀಹರ್ಷ, ರಾಘವೇಂದ್ರ, ಸುದೀಂದ್ರ, ಪರಮೇಶ್ವರಪ್ಪ ಸೇರಿದಂತೆ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.