ವೈಜ್ಞಾನಿಕ ಅರಿವಿನೊಂದಿಗೆ ಜನಪದ ಸಂಸ್ಕೃತಿಯೂ ಕಂಗೊಳಿಸಲಿ
ಶಿವಮೊಗ್ಗ: ಜಗತ್ತು ವೈಜ್ಞಾನಿಕ ಅರಿವಿನ ಹಿಂದೆ ಸಾಗುತ್ತಿರುವ ಸಂದರ್ಭದಲ್ಲಿ ನಾವು ಹಳೆಯ ಸಂಪ್ರದಾಯಗಳಿಗೆ ಏಕೆ ಜೋತುಬೀಳಬೇಕು ಎಂಬ ಪ್ರಶ್ನೆ ಕೆಲವರಲ್ಲಿದೆ. ಆದರೆ ಜನಪದ ಅಡುಗೆ, ಉಡುಗೆ, ಆಚಾರ–ವಿಚಾರ ಸೇರಿದಂತೆ ನಮ್ಮ ಬದುಕಿನ ಪ್ರತಿಯೊಂದು ಆಯಾಮವೂ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಜನಪದ ಗಾಯಕ ಕೆ. ಯುವರಾಜ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಜನಪದ ವಾದ್ಯ ಪರಿಕರಗಳನ್ನು ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ. ದೇಶದ ಸಂಸ್ಕೃತಿ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು. ಮಹಿಳೆಯರು ನಿತ್ಯ ಜೀವನದಲ್ಲಿ ನಿರ್ವಹಿಸುವ ಅನೇಕ ಕೆಲಸಗಳಿಗೆ ಸೂಕ್ತ ಮಾನ್ಯತೆ ದೊರೆಯದಿದ್ದರೂ, ಅವರು ಬದ್ಧತೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಈ ಆಶಯವನ್ನು ಬಿಂಬಿಸುವ ‘ಬಾ ತಂಗಿ ಬಾರವ್ವ’ ಜನಪದ ಗೀತೆಯನ್ನು ಹಾಡಿ ಅವರು ರಂಜಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡೋಜ ಡಾ. ಎಚ್.ಎಲ್. ನಾಗೇಗೌಡರು ಆರಂಭಿಸಿದ ಕರ್ನಾಟಕ ಜಾನಪದ ಪರಿಷತ್ತು ಜನಪದ ಕಲೆ ಮತ್ತು ಕಲಾವಿದರಿಗೆ ನೆರವಾಗುವ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಜನಪದ ಕಲೆ ಹಾಗೂ ಕಲಾವಿದರನ್ನು ಜೋಪಾನ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಬೇಕು ಎಂದರು.
1946ರಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಜನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನಗರದ 15 ಕಾಲೇಜುಗಳ ವಿದ್ಯಾರ್ಥಿಗಳು ತಂಡಗಳನ್ನು ರಚಿಸಿಕೊಂಡು ತಾಲೀಮು ನಡೆಸಿ ಉತ್ತಮ ಕಲಾ ಪ್ರದರ್ಶನ ನೀಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಯುವ ನಾಯಕ ಕಾಂತರಾಜ್ ಸೋಮಿನಕೊಪ್ಪ ಮಾತನಾಡಿ, ಜನಪದ ಕಲೆ ಮತ್ತು ಸಾಹಿತ್ಯವನ್ನು ಹಣಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದನ್ನು ಉಳಿಸುವ ಕೆಲಸ ಅರ್ಥಪೂರ್ಣವಾಗಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಜನಪದ ಬದುಕಿಗೆ ಸ್ಫೂರ್ತಿ ನೀಡುವ ಶಕ್ತಿಯನ್ನು ಹೊಂದಿದೆ. ಯಾರೋ ಏನೋ ಹೇಳಿದರು ಎಂಬ ಕಾರಣಕ್ಕೆ ನಮ್ಮ ಆಚಾರ–ವಿಚಾರಗಳಿಂದ ದೂರವಾಗಬಾರದು ಎಂದರು.
ಶ್ರೀಮಂತ ಜನಪದ ಸೊಬಗನ್ನು ಉಳಿಸಿ ಬೆಳೆಸಲು ನಮ್ಮ ಆಹಾರ ಪದ್ಧತಿಯನ್ನು ಅನುಸರಿಸುವಲ್ಲಿ ವಿಮುಖರಾಗಬಾರದು. ಹಬ್ಬಗಳ ಆಚರಣೆ ಹಾಗೂ ಆಯಾ ಕಾಲದ ಹಬ್ಬಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ಅಡುಗೆಯ ರುಚಿಯನ್ನು ಮರೆಯಬಾರದು. ಗ್ರಾಮೀಣ ಪ್ರದೇಶಗಳ ಹಬ್ಬ, ಜಾತ್ರೆಗಳಲ್ಲಿ ಭಾಗವಹಿಸುವ ಮೂಲಕ ಜನಪದ ಬದುಕನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿಯೊಂದಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ನೀಡಿರುವ ಜನಪದ ವಾದ್ಯ ಪರಿಕರಗಳು ಕಾಲೇಜಿನ ಆಸ್ತಿಯಾಗಿದ್ದು, ವಿದ್ಯಾರ್ಥಿಗಳ ಆಸಕ್ತಿ ಹಾಗೂ ಉತ್ತಮ ಚಟುವಟಿಕೆಗಳಿಗೆ ಕಾಲೇಜು ಸದಾ ಬೆಂಬಲ ನೀಡಲಿದೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಗಿರಿಧರ ಕೆ.ವಿ., ಸಾಂಸ್ಕೃತಿಕ ಸಂಚಾಲಕ ಡಾ. ವೀರಶೆಟ್ಟಿ ರಾಥೋಡ್, ಸಾಂಸ್ಕೃತಿಕ ಸಮಿತಿ ಸಹ ಸಂಚಾಲಕ ಡಾ. ಲವ ಜಿ.ಆರ್. ಹಾಗೂ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಉಪಸ್ಥಿತರಿದ್ದರು.
ಜನಪದ ಕಲಾವಿದರಾದ ನಾಗರಾಜ್ ತೋಂಬ್ರಿ ಹಾಗೂ ಪ್ರಭಯ್ಯ ಜಕ್ಕಲಿಮಠ ಕಲಾ ಪ್ರದರ್ಶನ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳ ವಿವಿಧ ಜನಪದ ತಂಡಗಳು ಹಾಡು, ನೃತ್ಯ ಸೇರಿದಂತೆ ವೈವಿಧ್ಯಮಯ ಕಲಾ ಪ್ರದರ್ಶನ ನೀಡಿದವು.
ವಿದ್ಯಾರ್ಥಿಗಳು ‘ಪರಂಜ್ಯೋತಿ’ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೂಪಶ್ರೀ ಸ್ವಾಗತಿಸಿದರು. ಧನುಷ್ ಆರ್. ವಂದಿಸಿದರು. ಚಂದನ ಹಾಗೂ ಹೇಮಂತ ಕಾರ್ಯಕ್ರಮ ನಿರೂಪಿಸಿದರು.

Leave a Comment