ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನೀರುಪಾಲು : 15 ವರ್ಷದ ವಿದ್ಯಾರ್ಥಿಗಾಗಿ ಶೋಧ ಕಾರ್ಯಾಚರಣೆ
ಶಿವಮೊಗ್ಗ:ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಬಳಿಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ಈಜಲು ತೆರಳಿದ್ದ 15 ವರ್ಷದ ಬಾಲಕ ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.
ನೀರುಪಾಲಾದ ಬಾಲಕನನ್ನು ಬೊಮ್ಮನಕಟ್ಟೆ ನಿವಾಸಿ ಕೃಷ್ಣ ಎಂದು ಗುರುತಿಸಲಾಗಿದೆ. ಕೃಷ್ಣ ಶಿವಮೊಗ್ಗ ನಗರದ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರು ಮಂದಿ ಸ್ನೇಹಿತರೊಂದಿಗೆ ಬಾಲಕ ತುಂಗಾ ಮೇಲ್ದಂಡೆ ನಾಲೆಗೆ ಈಜಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಈಜುತ್ತಿದ್ದ ಕೃಷ್ಣ ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಕಣ್ಮರೆಯಾಗಿದ್ದಾನೆ.
ಸ್ನೇಹಿತರು ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ, ನೀರಿನ ಹರಿವು ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಲೆಯಲ್ಲಿ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಹಾಗೂ ಯುವಕರು ಅಪಾಯದ ಸ್ಥಳಗಳಲ್ಲಿ ಈಜಲು ತೆರಳದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Leave a Comment