ಸೊರಬದಲ್ಲಿ ಸಂಭ್ರಮದಿಂದ ತಿರು ಓಣಂ ಆಚರಣೆ

ಸೊರಬ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲಯಾಳಿ ಭಾಷಿಕರ ಪ್ರಮುಖ ಹಬ್ಬವಾದ ತಿರು ಓಣಂವನ್ನು ಬುಧವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಹೊಸ ಉಡುಗೆ-ತೊಡುಗೆ ತೊಟ್ಟ ಮಹಿಳೆಯರು ಮತ್ತು ಮಕ್ಕಳು ಒಟ್ಟಾಗಿ ಸೇರಿ ತಮ್ಮ ಮನೆಯಂಗಳದಲ್ಲಿ ಓಣಂ ಹಬ್ಬದ ಪ್ರಮುಖ ವೈಶಿಷ್ಟ್ಯವಾದ ಹೂವಿನ ರಂಗೋಲಿ ‘ಪೂಕಳಂ’ ಬಿಡಿಸಿ ಸಂಭ್ರಮಿಸಿದರು.
ಮನೆಯಂಗಳವನ್ನು ವಿಶೇಷವಾಗಿ ಸಿಂಗರಿಸಿದ ಮಹಿಳೆಯರು ಕೇರಳದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ, ಹೂವಿನ ರಂಗೋಲಿಗೆ ದೀಪ ಬೆಳಗಿಸಿದರು. ಬಳಿಕ ಪರಸ್ಪರ ಓಣಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಸಿದ್ಧಪಡಿಸಿದ್ದ ವಿಶೇಷ ಭೋಜನವನ್ನು ಕುಟುಂಬಸ್ಥರು ಹಾಗೂ ಬಂಧು-ಬಳಗದವರು ಒಟ್ಟಾಗಿ ಸವಿದು ಸಂತಸ ಹಂಚಿಕೊಂಡರು.
ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಓಣಂ ಹಬ್ಬವು ವರ್ಷದ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗುವ ಸಂದರ್ಭದ ಸಂಭ್ರಮವೂ ಆಗಿದೆ. ಕೇರಳಿಗರ ನಂಬಿಕೆಯಂತೆ ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಆಗಮಿಸುತ್ತಾನೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ವಿಶೇಷ ಮಹತ್ವವಿದೆ.
ಸೊರಬದಲ್ಲಿ ಮಲಯಾಳಿ ಸಮುದಾಯದವರು ಸಾಂಪ್ರದಾಯಿಕ ರೀತಿಯಲ್ಲಿ ಓಣಂ ಆಚರಿಸುವ ಮೂಲಕ ಕೇರಳದ ಸಂಸ್ಕೃತಿ ಮತ್ತು ಪರಂಪರೆಯನ್ನು ಮೆರೆದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.