ಆಧ್ಯಾತ್ಮದ ಜತೆಗೆ ವಿಜ್ಞಾನ ಶಿಕ್ಷಣಕ್ಕೆ ಆದ್ಯತೆ: ರಾಮಕೃಷ್ಣ ಸಂಸ್ಥೆಗೆ ಶ್ರೀಗಳ ಮೆಚ್ಚುಗೆ
ಆಧ್ಯಾತ್ಮದೊಂದಿಗೆ ವೈಜ್ಞಾನಿಕ ಶಿಕ್ಷಣ: ರಾಮಕೃಷ್ಣ ಸಂಸ್ಥೆಗೆ ಕಾಲೇಜಿನ ಗರಿಮೆ
ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಸಂಸ್ಥೆಯ ಹೊಸ ಹೆಜ್ಜೆ: ಪಿಯು ಕಾಲೇಜು ಲೋಕಾರ್ಪಣೆ
ಆಧ್ಯಾತ್ಮ ಮತ್ತು ವಿಜ್ಞಾನ ಶಿಕ್ಷಣದ ಸಮನ್ವಯವೇ ರಾಮಕೃಷ್ಣ ಸಂಸ್ಥೆಯ ಹೆಗ್ಗಳಿಕೆ: ಶ್ರೀಗಳು
ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ: ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳ ಹಾರೈಕೆ
ಶಿವಮೊಗ್ಗ,ನ.4:ಕಳೆದ 24 ವರ್ಷಗಳಿಂದ ಶಿಕ್ಷಣದಲ್ಲಿ ಹೊಸತನ ಮೂಡಿಸಿದ ಹಾಗೂ ಪ್ರೀಕೆಜಿಯಿಂದ ಎಸ್ಎಸ್ ಎಲ್ ಸಿ ವರೆಗೆ ಹತ್ತಾರು ಶಾಲೆಗಳಲ್ಲಿ, ಗುರುಕುಲ ವಸತಿ ವಿದ್ಯಾಲಯಗಳಲ್ಲಿ ಆದ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ಸಂಸ್ಥೆಗೆ ಈಗ ಕಾಲೇಜು ಗರಿಮೆ ಮೂಡಿರುವುದು ಸ್ವಾಗತಾರ್ಹ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲನಂದನಾಥ ಮಹಾ ಸ್ವಾಮಿಜಿ ತಿಳಿಸಿದರು.
ಅವರಿಂದು ಮಧ್ಯಾಹ್ನ ಅನುಪಿನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ರಾಮಕೃಷ್ಣ ಪಿಯು ಕಾಲೇಜ್ ಹಾಗೂ ವಿದ್ಯಾರ್ಥಿ ನಿಲಯದ ಭವ್ಯ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಿದ್ದರು.
ಅಧ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಕಲ್ಪನೆಯೊಂದಿಗೆ ಬೆಳೆದು ಬಂದ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಈಗ ಪಿಯು ಕಾಲೇಜಿಗೆ ಅಡಿಪಾಯ ಇಟ್ಟಿರುವುದು ಸ್ವಾಗತಾರ್ಹ. ಇದರಿಂದ ಸಾಕಷ್ಟು ಪ್ರತಿಭಾನ್ವಿತ ಮಕ್ಕಳಿಗೆ ಹೊಸ ದಾರಿದೀಪ ನೀಡಲಿದೆ ಎಂದು ಹೇಳಿದರು.
ಇಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯ ಕಾಲೇಜುಗಳು ಹೊರ ಬರುತ್ತಿವೆ. ಆದರೆ ರಾಮಕೃಷ್ಣ ಹೆಸರಿನ ಅದರ ಅರ್ಥಪೂರ್ಣ ಯೋಚನೆಯ ಕಾಲೇಜು ಆರಂಭಗೊಂಡಿದೆ. ದೇಶದ ಚರಿತ್ರೆಯನ್ನು ನಾವು ಎರಡು ಭಾಗವಾಗಿ ವಿಂಗಡಿಸಿ ನೋಡಿದಾಗ ವಿಜ್ಞಾನ, ಶಿಕ್ಷಣ ಹಾಗೂ ಬದುಕು ಅರ್ಥವಾಗುತ್ತದೆ ಎಂದ ಸ್ವಾಮೀಜಿ ವಿವೇಕಾನಂದರ ಪೂರ್ವದ ಹಾಗೂ ನಂತರದ ಅವಧಿಯನ್ನು ಎರಡು ಭಾಗವಾಗಿ ಅವಲೋಕಿಸಬೇಕಾಗಿದೆ ಎಂದರು.
ಸ್ವಾಮಿ ವಿವೇಕಾನಂದರನ್ನು ತಿದ್ದಿದ ಗುರು ಶ್ರೀ ರಾಮಕೃಷ್ಣರು ವಿಶ್ವದ ಒಂದು ದೊಡ್ಡ ಶಕ್ತಿಗೆ ಚೈತನ್ಯವಾದಂತಹವರು. ಜಗತ್ತಿನ ಸೇವೆಯನ್ನು ಮಾಡುತ್ತಾ ನಿನ್ನ ಮುಕ್ತಿಯನ್ನು ನೀನು ಪಡೆ ಎಂಬ ರಾಮಕೃಷ್ಣ ಆಶ್ರಮದ ವಾಕ್ಯ, ಸ್ವಾಮಿ ವಿವೇಕಾನಂದರ ದ್ಯೇಯೋದ್ದೇಶ ಈಗಲೂ ನಾಡಿನಲ್ಲಿ ಹಾಗೂ ವಿಶ್ವದಲ್ಲಿ ಪ್ರಸ್ತುತ ಆಗಿದೆ ಎಂದರು.
ರಾಮಕೃಷ್ಣ ಹೆಸರಿನ ಸಂಸ್ಥೆಯಲ್ಲಿ ವಿಜ್ಞಾನದ ಕಾಲೇಜು ಬೇಕೇ ಎಂದು ಯೋಚಿಸಿದಾಗ ಸ್ವಾಮಿ ವಿವೇಕಾನಂದರ ಮಾತುಗಳು ನೆನಪಾಗುತ್ತವೆ. ಜಗತ್ತಿನ ಅತಿ ದೊಡ್ಡ ಹಾಗೂ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮ ಎಂಬ ಶಕ್ತಿ ಮೊಳೆಯಲು ಬೆಳೆಯಲು ಕಾರಣಕರ್ತರಾದವರನ್ನು ಅವಲೋಕಿಸಿದಾಗ ರಾಮಕೃಷ್ಣ ಸಂಸ್ಥೆ ಒಂದು ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಶುಭವಾಗಲಿ ಎಂದರು.
ಈ ಜಗತ್ತಿನಲ್ಲಿ ನಾನು ಏನನ್ನು ಮಾಡಬೇಕು ಎಷ್ಟರಮಟ್ಟಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂಬ ಚಿಂತನೆಗೆ ನಿಜಕ್ಕೂ ಒಂದು ಶಕ್ತಿ ನೀಡುವ ರಾಮಕೃಷ್ಣರಂತಹ ಗುರುಗಳು ಇಂತಹ ಸಂಸ್ಥೆಗಳಲ್ಲಿ ಮಾತ್ರ ದೊರಕಲು ಸಾಧ್ಯ ಎಂದು ಸಂಸ್ಥೆಯ ಬಗ್ಗೆ ಹಾಗೂ ಅದರ ಹೆಜ್ಜೆಯ ಬಗ್ಗೆ ಅಭಿನಂದಿಸಿ ಶುಭ ಹಾರೈಸಿದರು.
ಶೋಭಾ ಅವರು ಮಕ್ಕಳ ದೇವತೆ,:ಶ್ರೀ ರಾಮಕೃಷ್ಣ ಆಶ್ರಮ ಶ್ರೀಗಳು
ಶೋಭಾ ವೆಂಕಟರಮಣ ಮಕ್ಕಳ ದೇವತೆ. ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ಎಲ್ಲಾ ಶಾಲೆಗಳನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಇಲ್ಲಿನ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ನಿಜಕ್ಕೂ ಆ ಮಕ್ಕಳ ಪಾಲಿಗೆ ದೇವತೆಯೇ ಹೌದು. ಅವರು ಸದಾ ಮಕ್ಕಳ ಜೊತೆ ಸ್ಪಂದಿಸುವ ರೀತಿ ಹಾಗೂ ಮಕ್ಕಳು ಅವರ ಬಗ್ಗೆ ಹೊಂದಿರುವ ಭಾಂದವ್ಯ ಕಂಡಾಗ ಅನಿಸಿದ ಪದವಿದು.
-ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಲು ಗಂಗೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಅವರು ತಮ್ಮ ಆಶೀರ್ವಚನದಲ್ಲಿ ಚಾರಿತ್ರ್ಯದಿಂದ ಶೋಭಿಸುವ ತೇಜಸ್ವಿಗಳ ಯುವಕರ ಪಡೆಯನ್ನು ಬೆಳೆಸಬೇಕೆಂಬ ಸ್ವಾಮಿ ವಿವೇಕಾನಂದರ ಆಶಯದಂತೆ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನಲ್ಲಿನ ಕಲಿತವರ ವ್ಯಕ್ತಿತ್ವ ವನ್ನು ಅತ್ಯಂತ ಸುಲಭವಾಗಿ ಗುರುತಿಸಬಹುದು. ಅದು ರಾಮಕೃಷ್ಣ ಶಾಲೆಯ ಯಾವುದೇ ವಿದ್ಯಾರ್ಥಿಗಳನ್ನು ನೋಡಿದಾಗ ಅರ್ಥವಾಗುತ್ತದೆ ಎಂದು ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಒಬ್ಬ ಅಧಿಕಾರಿಯಾಗಿ ಸಿಕ್ಕು ನಡೆದುಕೊಂಡ ರೀತಿಯನ್ನು ಎಳೆಯಾಗಿ ಬಿಡಿಸಿ ಹೇಳಿದರು.
ಶ್ರದ್ಧೆ, ವಿನಯ, ಸೌಜನ್ಯ, ವೈಶಾಲ್ಯತೆ, ಸಾಮರಸ್ಯ ಎಲ್ಲ ಗುಣಗಳು ಒಂದೇ ಕಡೆ ಸಿಗುವಂತಹ ವೇದಿಕೆ ಇಲ್ಲಿ ನಿರ್ಮಾಣವಾಗಿದೆ. ಅಂತಹ ಕಾರ್ಯಗಳು ನಿರಂತರವಾಗಿ ಇಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ದೇವರಾಜ್ ಅವರು 1991ರಲ್ಲಿ ಕೇವಲ ಐದು ಮಕ್ಕಳ ಹಾಸ್ಟೆಲ್ ಹಾಗೂ ಎಂಟು ವಿದ್ಯಾರ್ಥಿಗಳ ಶಾಲೆಯನ್ನು ಆರಂಭಿಸಿ ಈಗ ಇಲ್ಲಿ 15 ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ ಪ್ರತಿವರ್ಷ 900 ರಿಂದ 1000 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ಹೊರ ಬರುತ್ತಿದ್ದಾರೆ ಇದಕ್ಕೆ ಶಿಕ್ಷಣ ಸಂಸ್ಥೆಗೆ ಸಹಕರಿಸಿದ ಸರ್ವರೂ ಹಾಗೂ ಇಡೀ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಕಾರ್ಯದರ್ಶಿ ಶೋಭಾ ಅವರ ಪ್ರಯತ್ನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷ ಡಾ. ನಾಗೇಶ್ ಅವರು ಕಾಲೇಜನ್ನು ಆರಂಭಿಸುವ ಚಿಂತನೆ ಮೊಳಗಿಸಿದ್ದು ನಮ್ಮ ವಿದ್ಯಾರ್ಥಿಗಳ ಪೋಷಕರಿಂದ. ಈ ಹಿನ್ನೆಲೆಯಲ್ಲಿ ಕಾಲೇಜನ್ನು ಆರಂಭಿಸಲಾಗಿದೆ ಎಂದರು.
ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಅವರು ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಹಾಗೂ ಇಂತಹ ಕಾಲೇಜು ಆರಂಭಕ್ಕೆ ಕಾರಣಕರ್ತರಾದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು.

Leave a Comment