ತುಂಗಾ ನದಿಯಲ್ಲಿ ಮುಳುಗಿದ ಬೆಂಗಳೂರಿನ ನಾಲ್ವರು ಯುವಕರು: ಮೂವರ ಮೃತದೇಹ ಪತ್ತೆ, ಮುಂದುವರಿದ ಶೋಧ ಕಾರ್ಯ

ತೀರ್ಥಹಳ್ಳಿ: ತಾಲೂಕಿನ ತುಂಗಾ ನದಿಯ ಹೊಸ ಸೇತುವೆಯ ಕೆಳಭಾಗದಲ್ಲಿ ಈಜಾಡಲು ನದಿಗೆ ಇಳಿದ ಬೆಂಗಳೂರಿನ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಈಗಾಗಲೇ ಮೂವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಮತ್ತೊಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಘಟನೆ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಾಳೂರು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಈಶ್ವರ ಮಲ್ಪೆ ಅವರು ಮತ್ತೆರಡು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶೋಧ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಈಶ್ವರ ಮಲ್ಪೆ, ಸಾಮಾಜಿಕ ಕಾರ್ಯಕರ್ತ ಕುರುವಳ್ಳಿ ನಾಗರಾಜ್, ಪ್ರಮೋದ್ ಪೂಜಾರಿ, ನಾಗೇಶ್ ಗುಂಡ, ಲಿಂಗರಾಜ್, ಕವಿರಾಜ್, ಪ್ರಕಾಶ್, ಸುಬ್ರಮಣ್ಯ ಶೆಟ್ಟಿ ಸೇರಿದಂತೆ ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರು ಕೈಜೋಡಿಸಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಆಗಮಿಸಿದ ಯುವಕರ ತಂಡವೂ ಕಾರ್ಯಾಚರಣೆಗೆ ಸಹಕರಿಸಿದೆ.

ಉದಯಪುರ, ಮೈಸಿ ಹಾಗೂ ದಬ್ಬಣಗದ್ದೆಯ ಯುವಕರು ಸೇರಿದಂತೆ ಸ್ಥಳೀಯರು ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದೊಂದಿಗೆ ಸಮನ್ವಯ ಸಾಧಿಸಿ, ಕತ್ತಲೆಯ ನಡುವೆಯೂ ಮೃತದೇಹಗಳನ್ನು ಹೊರತೆಗೆಯಲು ನೆರವಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ತೋರಿದ ಮಾನವೀಯತೆ ಮತ್ತು ಒಗ್ಗಟ್ಟಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ನಾಲ್ವರು ಯುವಕರ ಪೈಕಿ ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.