ನಿವೃತ್ತ ಎಎಸ್‌ಐ ಬಸಪ್ಪ ಕೆ. ನಿಧನ

ಪಿಂಚಣಿಗಾಗಿ ಕೊನೆಯವರೆಗೂ ಹೋರಾಡಿದ ಮಾಜಿ ಪೊಲೀಸ್ ಅಧಿಕಾರಿ ಇನ್ನಿಲ್ಲ
ನಿವೃತ್ತಿಯ ಬಳಿಕವೂ ನ್ಯಾಯಕ್ಕಾಗಿ ನಡೆಸಿದ ಹೋರಾಟಕ್ಕೆ ಸಿಗದ ಫಲ; ಮಾಚೇನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಸಪ್ಪ

ಶಿವಮೊಗ್ಗ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಹುದ್ದೆಯಿಂದ ನಿವೃತ್ತರಾಗಿದ್ದ ಬಸಪ್ಪ ಕೆ. (80) ಅವರು ನ.7ರಂದು ಬೆಳಗಿನ ಜಾವ 4 ಗಂಟೆಗೆ ಶಿವಮೊಗ್ಗದ ಆಲ್ಕೊಳದಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

1946ರಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬರ್ಮಸಾಗರದಲ್ಲಿ ಜನಿಸಿದ್ದ ಬಸಪ್ಪ ಕೆ. ಅವರು ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ರಾಜ್ಯದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುದೀರ್ಘ ಸೇವೆಯ ಬಳಿಕ 2008ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಸಂಘದ ಸದಸ್ಯತ್ವ ಹೊಂದಿದ್ದ ಅವರು SHR-007/18ರ ಅಡಿಯಲ್ಲಿ ಎವೈ ಕಾರ್ಡ್ ಹೊಂದಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪಿಂಚಣಿಗಾಗಿ ಕೊನೆಯವರೆಗೂ ಹೋರಾಟ

ಬಸಪ್ಪ ಅವರ ಬದುಕಿನ ಕೊನೆಯ ವರ್ಷಗಳು ಪಿಂಚಣಿ ಹೋರಾಟದ ನೋವಿನೊಂದಿಗೆ ಕಳೆದವು. ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ಬ್ಯಾಂಕ್‌ಗಳಿಗೆ ತೆರಳಿ ಜೀವಿತ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ಪಡೆಯುವ ಸಂದರ್ಭದಲ್ಲಿ, ಬಸಪ್ಪ ಅವರು ಮಾತ್ರ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದರು. ಬೇರೆಯವರ ತಪ್ಪಿನಿಂದಾಗಿ ಜೈಲು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿ, ಅದರ ಪರಿಣಾಮವಾಗಿ ಪಿಂಚಣಿಯೂ ದೊರೆಯದೆ ಜೀವನದ ಕೊನೆಯವರೆಗೂ ಸಂಕಷ್ಟ ಅನುಭವಿಸುವಂತಾಯಿತು ಎಂದು ಸಂಘದ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ತಮಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪಿಂಚಣಿ ಸೌಲಭ್ಯ ಮರುಸ್ಥಾಪಿಸಬೇಕು ಎಂಬ ಉದ್ದೇಶದಿಂದ ಅವರು ಕೊನೆಯವರೆಗೂ ನಿರಂತರ ಪ್ರಯತ್ನ ನಡೆಸಿದ್ದರು. ಈ ಹಿಂದಿನ ಮೂವರು ಪೊಲೀಸ್ ಅಧೀಕ್ಷಕರ ಮೂಲಕ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನಲ್ಲಿಯೂ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರೂ ನಿರೀಕ್ಷಿತ ಫಲ ದೊರೆಯಲಿಲ್ಲ. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.