ನಗದು, ಚಿನ್ನಾಭರಣವಿದ್ದ ಬ್ಯಾಗ್ ಮಾಲೀಕರಿಗೆ ಮರಳಿಸಿದ ಕಾರ್ಗಲ್ ಪೊಲೀಸರು
ಕರ್ತವ್ಯನಿಷ್ಠೆ, ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ
ಶಿವಮೊಗ್ಗ: ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ನಗದು ಹಣ, ಬಂಗಾರದ ಒಡವೆಗಳು ಹಾಗೂ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಅನ್ನು ಪತ್ತೆಹಚ್ಚಿದ ಕಾರ್ಗಲ್ ಪೊಲೀಸರು, ಅದರ ವಾರಸುದಾರರನ್ನು ಗುರುತಿಸಿ ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ ಹಾಗೂ ಸಿಬ್ಬಂದಿ ಜೋಗದ ಕಡೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿ ಅನಾಮಧೇಯ ಬ್ಯಾಗ್‌ವೊಂದು ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ನಗದು ಹಣ, ಬಂಗಾರದ ಒಡವೆಗಳು, ಬೆಲೆಬಾಳುವ ವಸ್ತುಗಳು ಹಾಗೂ ಇತರೆ ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಬ್ಯಾಗ್‌ನಲ್ಲಿದ್ದ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಆಧರಿಸಿ ಮೊಬೈಲ್ ಸಂಖ್ಯೆಯ ಮೂಲಕ ಮಾಲೀಕರನ್ನು ಸಂಪರ್ಕಿಸಿದ ಪೊಲೀಸರು, ಬ್ಯಾಗ್ ಪತ್ತೆಯಾಗಿರುವ ವಿಷಯವನ್ನು ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಬ್ಯಾಗ್‌ನ ಮಾಲೀಕರಿಗೆ ಅದರಲ್ಲಿದ್ದ ನಗದು ಹಣ, ಬಂಗಾರದ ಒಡವೆಗಳು, ಬೆಲೆಬಾಳುವ ವಸ್ತುಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಬ್ಯಾಗ್ ಸಮೇತ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಈ ಪ್ರಾಮಾಣಿಕ ಕಾರ್ಯಕ್ಕೆ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ ಹಾಗೂ ಸಿಬ್ಬಂದಿಗಳಾದ ಅಣ್ಣಪ್ಪ, ಪುರುಷೋತ್ತಮ್ ಮತ್ತು ಮಲ್ಲಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.
ಕಳೆದುಹೋದ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ತಲುಪಿಸುವ ಮೂಲಕ ಪೊಲೀಸರು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

Leave a Comment