ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿನ ಚಿನ್ನಿ ಟೆಲಿಲಿಂಕ್ಸ್ ಮತ್ತು ಜೆರಾಕ್ಸ್ ಮಳಿಗೆಗೆ ಸಂಬಂಧಿಸಿದಂತೆ ಸಿಮ್ಸ್ ನಿರ್ದೆಶಕರಿಗೆ ದೂರು

ಮೆಗ್ಗಾನ್ ಆಸ್ಪತ್ರೆ ಮತ್ತು ಸಿಮ್ಸ್ ಆವರಣದ ವಾಣಿಜ್ಯ ಮಳಿಗೆಗಳ ಹಂಚಿಕೆ, ಬಾಡಿಗೆ ವ್ಯವಹಾರಗಳ ಪರಿಶೀಲನೆಗೆ ಆಗ್ರಹಿಸಿ ಸಿಮ್ಸ್ ನಿರ್ದೇಶಕರಿಗೆ ದೂರು ಅರ್ಜಿಯನ್ನು ನೀಡಲಾಗಿದೆ.

ಟೆಂಡರ್ ಪ್ರಕ್ರಿಯೆ, ಮುಂಗಡ ಹಣ, ಬಾಡಿಗೆ ಹಾಗೂ ಆಡಳಿತಾತ್ಮಕ ಅನುಮೋದನೆಗಳ ಕುರಿತು ಸಮಗ್ರ ತನಿಖೆಗೆ ಮನವಿ

ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಆಸ್ಪತ್ರೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿನ್ನಿ ಟೆಲಿಲಿಂಕ್ಸ್ ಮತ್ತು ಜೆರಾಕ್ಸ್ ಮಳಿಗೆಗೆ ಸಂಬಂಧಿಸಿದಂತೆ ವಾಣಿಜ್ಯ ಮಳಿಗೆಗಳು, ಬಾಡಿಗೆ, ಮುಂಗಡ ಹಣ, ಟೆಂಡರ್ ಪ್ರಕ್ರಿಯೆ ಹಾಗೂ ಆಡಳಿತಾತ್ಮಕ ಅನುಮೋದನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ.
ಈ ಕುರಿತು 'ಹಲೋ ಶಿವಮೊಗ್ಗ' ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕರಾದ ಡಿ.ಜಿ. ನಾಗರಾಜ್ ಅವರು ನವೆಂಬರ್ 4ರಂದು ಸಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಮೆಗ್ಗಾನ್ ಬೋಧನಾ ಆಸ್ಪತ್ರೆ ಹಾಗೂ ಸಿಮ್ಸ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳು, ಟೀ ಸ್ಟಾಲ್‌ಗಳು ಮತ್ತು ಜೆರಾಕ್ಸ್ ಮಳಿಗೆಗಳ ಹಂಚಿಕೆ ಹಾಗೂ ಬಾಡಿಗೆ ವ್ಯವಹಾರಗಳ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಮಗ್ರ ದಾಖಲೆ ಪರಿಶೀಲನೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮಳಿಗೆಗಳ ಹಂಚಿಕೆಗೆ ಸಂಬಂಧಿಸಿದ ಟೆಂಡರ್ ಅಧಿಸೂಚನೆಗಳು, ಹಂಚಿಕೆ ಆದೇಶಗಳು, ಮುಂಗಡ ಹಣದ ಪಾವತಿ ವಿವರಗಳು, ಬಾಡಿಗೆ ಒಪ್ಪಂದಗಳು, ಪರವಾನಗಿ ಪತ್ರಗಳು ಹಾಗೂ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಅಲ್ಲದೆ, ಮಳಿಗೆಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ವಿವರಗಳನ್ನೂ ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.

ಮಳಿಗೆಗಳ ಹಂಚಿಕೆ, ಬಾಡಿಗೆ ನಿಗದಿ, ಬಾಡಿಗೆ ಪರಿಷ್ಕರಣೆ ಹಾಗೂ ಗುಟ್ಟಿಗೆ ಅಥವಾ ಗುತ್ತಿಗೆಗೆ ಸಂಬಂಧಿಸಿದ ಆದೇಶಗಳ ದಾಖಲೆಗಳನ್ನು ಪರಿಶೀಲಿಸಬೇಕು. ಈ ಕುರಿತು ನಡೆದ ಸಭೆಗಳ ನಡಾವಳಿಗಳು (Minutes of Meetings) ಹಾಗೂ ಸಂಬಂಧಿತ ಸಮಿತಿಗಳ ಸಭೆಯ ನಿರ್ಣಯಗಳ ಪ್ರತಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ನಿಯಮಾವಳಿ, ಭದ್ರತಾ ಸೇವೆಗಳು, ಇತರ ಶುಲ್ಕಗಳು ಹಾಗೂ ಬಾಡಿಗೆ ಮೊತ್ತಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನೂ ಪರಿಶೀಲಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ನಿಯಮ ಉಲ್ಲಂಘನೆ ಅಥವಾ ಆಡಳಿತಾತ್ಮಕ ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು, ರೋಗಿಗಳ ಸಂಬಂಧಿಕರು ಹಾಗೂ ಸಾರ್ವಜನಿಕರು ಭೇಟಿ ನೀಡುವುದರಿಂದ ಆಸ್ಪತ್ರೆಯ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು. ಈ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿ.ಜಿ. ನಾಗರಾಜ್ ಅವರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.