ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ನೆರವಾದ ಅಕ್ಕ ಪಡೆ ಸಿಬ್ಬಂದಿ
ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸರು
ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಮೂಲಕ ಶಿವಮೊಗ್ಗದ ಅಕ್ಕ ಪಡೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ದಿನಾಂಕ 24-11-2026ರಂದು ಅಕ್ಕ ಪಡೆ ಸಿಬ್ಬಂದಿಯವರು ಎಲ್.ಬಿ.ಎಸ್. ನಗರದ ಕಡೆ ಗಸ್ತು ಕರ್ತವ್ಯ ನಿರ್ವಹಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹೆಚ್ಚಿನ ಜನರು ಸೇರಿರುವುದನ್ನು ಗಮನಿಸಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ವಿಚಾರಿಸಿದಾಗ, ಮಹಿಳೆಯೊಬ್ಬರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿರುವುದು ತಿಳಿದುಬಂದಿದೆ. ಅಪಘಾತದಿಂದ ಗಾಯಗೊಂಡಿದ್ದ ಮಹಿಳೆಗೆ ತಕ್ಷಣ ನೆರವಾದ ಅಕ್ಕ ಪಡೆ ಸಿಬ್ಬಂದಿ, ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸಂಚಾರ ಪೊಲೀಸರಿಗೂ ವಿಷಯ ತಿಳಿಸುವಂತೆ ಸೂಚಿಸಿದ್ದಾರೆ.
ನಂತರ ಗಾಯಗೊಂಡ ಮಹಿಳೆಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೆಟ್ರೋ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಮಾನವೀಯ ಕಾರ್ಯದಲ್ಲಿ ಅಕ್ಕ ಪಡೆ ಸಿಬ್ಬಂದಿಗಳಾದ ಹೇಮಾವತಿ WASI, ಆಕಾಂಕ್ಷಾ ರವಿ WPC, ಸುಪ್ರಿಯ ಕೆ. WHG ಹಾಗೂ ವಿದ್ಯಾಶ್ರೀ ಕೆ. WHG ಅವರು ಭಾಗವಹಿಸಿದ್ದರು.
ಕರ್ತವ್ಯದ ಜೊತೆಗೆ ಸಂಕಷ್ಟದಲ್ಲಿದ್ದ ಮಹಿಳೆಗೆ ಸಮಯೋಚಿತವಾಗಿ ನೆರವಾದ ಅಕ್ಕ ಪಡೆ ಸಿಬ್ಬಂದಿಯವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment