*ನರಕ ಚತುರ್ದಶಿ ಮತ್ತು ಲಕ್ಷ್ಮೀಪೂಜೆ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ!*

 ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ) ಇತಿಹಾಸ ಮತ್ತು ಮಹತ್ವ, ಶ್ರೀಮದ್ಭಾಗವತ ಪುರಾಣದ ಪ್ರಕಾರ, ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ಬಹಳ ತೊಂದರೆ ಗಳನ್ನು ಕೊಡತೊಡಗಿದನು. ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು.
ಮತ್ತು ಜನರಿಗೆ ತೊಂದರೆ ನೀಡುವುದರ ಜೊತೆಗೆ 16,000 ರಾಜಕನ್ಯೆಯರನ್ನು ಸೆರೆಮನೆಯಲ್ಲಿಟ್ಟಿದ್ದನು. ಆಗ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಯುದ್ಧ ಮಾಡಿ ನರಕಾಸುರನನ್ನು ಸಂಹರಿಸಿ ರಾಜಕನ್ಯೆಯರನ್ನು ಮುಕ್ತಗೊಳಿಸಿದನು. ಮರಣದ ಸಮಯದಲ್ಲಿ ನರಕಾಸುರನು ಈ ದಿನ ಮಂಗಲಸ್ನಾನ ಮಾಡುವವರಿಗೆ ನರಕದ ತೊಂದರೆ ಉಂಟಾಗಬಾರದೆಂದು ವರವನ್ನು ಬೇಡಿದನು. ಶ್ರೀಕೃಷ್ಣನು ವರ ನೀಡಿದನು. ಅಂದಿನಿಂದ ಈ ದಿನವನ್ನು ನರಕ ಚತುರ್ದಶಿಯೆಂದು ಆಚರಿಸಲಾಗುತ್ತದೆ.

ಹಬ್ಬವನ್ನು ಆಚರಿಸುವ ಪದ್ಧತಿ :
ಸೂರ್ಯೋದಯಕ್ಕೆ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗಸ್ನಾನ ಮಾಡುತ್ತಾರೆ. ಸ್ನಾನದ ನಂತರ ಅಪಮೃತ್ಯು ನಿವಾರಣೆಗಾಗಿ ಯಮತರ್ಪಣ ಮಾಡುತ್ತಾರೆ. ತಾಯಂದಿರು ಮಕ್ಕಳಿಗೆ ಆರತಿ ಎತ್ತುತ್ತಾರೆ. ನರಕಾಸುರನ ವಧೆಯ ಪ್ರತೀಕವಾಗಿ ಕೆಲವು ಕಡೆ ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜುವ ಪದ್ಧತಿಯಿದೆ. ಸಂಜೆ ದೀಪದಾನ ಮಾಡುತ್ತಾರೆ ಹಾಗೂ ಪ್ರದೋಷಪೂಜೆ ಮತ್ತು ಶಿವಪೂಜೆಯನ್ನು ನೆರವೇರಿಸುತ್ತಾರೆ.

*ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)*
ಇತಿಹಾಸ ಮತ್ತು ಮಹತ್ವ:
ಪುರಾಣದ ಕಥೆಯ ಪ್ರಕಾರ, ಈ ದಿನ ಶ್ರೀವಿಷ್ಣುವು ಲಕ್ಷ್ಮೀದೇವಿ ಸೇರಿದಂತೆ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಬಂಧನದಿಂದ ಮುಕ್ತಗೊಳಿಸಿದನು. ಆದ್ದರಿಂದ ಈ ಅಮಾವಾಸ್ಯೆಯನ್ನು ಶುಭ ಹಾಗೂ ಆನಂದದ ದಿನವೆಂದು ಪರಿಗಣಿಸಲಾಗುತ್ತದೆ.

ಹಬ್ಬವನ್ನು ಆಚರಿಸುವ ಪದ್ಧತಿ :
ಬೆಳಿಗ್ಗೆ ಮಂಗಲಸ್ನಾನ ಮಾಡಿ ದೇವರ ಪೂಜೆ ಮಾಡುತ್ತಾರೆ. ಸಂಜೆ ಪ್ರದೋಷಕಾಲದಲ್ಲಿ ಲಕ್ಷ್ಮೀದೇವಿ, ಶ್ರೀವಿಷ್ಣು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮೀದೇವಿಗೆ ಹಾಲಿನ ಖವೆಯ ನೈವೇದ್ಯ, ಕೊತ್ತಂಬರಿ, ಬೆಲ್ಲ, ಭತ್ತದ ಅರಳು ಮತ್ತು ಬತ್ತಾಸುಗಳನ್ನು ಅರ್ಪಿಸುತ್ತಾರೆ. ದಕ್ಷಿಣ ದಿಕ್ಕಿಗೆ ದೀವಟಿಗೆಯನ್ನು ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಬ್ರಾಹ್ಮಣರಿಗೆ ಹಾಗೂ ಹಸಿದವರಿಗೆ ಅನ್ನದಾನ ಮಾಡುತ್ತಾರೆ ಮತ್ತು ರಾತ್ರಿ ಜಾಗರಣೆ ಮಾಡುತ್ತಾರೆ.

ಲಕ್ಷ್ಮೀದೇವಿಯ ಆಗಮನದ ಮಹತ್ವ :
ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷ್ಮೀದೇವಿಯು ತನ್ನ ನಿವಾಸಕ್ಕಾಗಿ ಯೋಗ್ಯವಾದ ಸ್ಥಳವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಸ್ವಚ್ಛತೆ, ಶಿಸ್ತು, ಧರ್ಮನಿಷ್ಠೆ, ಸಂಯಮ ಮತ್ತು ಸನ್ನಡತೆ ಇರುವ ಮನೆಗಳಲ್ಲಿ ನೆಲೆಸಲು ಅವಳು ಇಷ್ಟಪಡುತ್ತಾಳೆ.
ಕೊತ್ತಂಬರಿಯು ಧನದ ಸಂಕೇತವಾಗಿದ್ದು, ಭತ್ತದ ಅರಳು ಸಮೃದ್ಧಿಯ ಪ್ರತೀಕವಾಗಿದೆ. ಆದ್ದರಿಂದ ಇವುಗಳನ್ನು ಲಕ್ಷ್ಮೀಪೂಜೆಯಲ್ಲಿ ಅರ್ಪಿಸಲಾಗುತ್ತದೆ.

ಶ್ರೀ ಸರಸ್ವತಿದೇವಿಯ ಪೂಜೆ
ಲಕ್ಷ್ಮೀಪೂಜೆಯ ನಂತರ ಜ್ಞಾನ ಮತ್ತು ವಿದ್ಯೆಯ ಅಧಿದೇವತೆಯಾದ ಶ್ರೀ ಸರಸ್ವತಿದೇವಿಯನ್ನು ಪೂಜಿಸುತ್ತಾರೆ. ಸಂಪತ್ತನ್ನು ಯೋಗ್ಯವಾಗಿ ಬಳಸಲು ಬೇಕಾದ ವಿವೇಕ, ಜ್ಞಾನ ಮತ್ತು ಸದ್ಬುದ್ಧಿಯನ್ನು ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ,  ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’) 

ಸಂಕಲನ : ಶ್ರೀ. ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ.
ಸಂಪರ್ಕ : 93425 99299

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.