15 ವರ್ಷಗಳ ಪರಿಶ್ರಮದಿಂದ ಬೆಳೆದ ಫಸಲು ನೀಡುತ್ತಿದ್ದ ಅಡಿಕೆ ಮರಗಳ ತೆರವು: ರೈತರಿಗೆ ನ್ಯಾಯ ಒದಗಿಸಲು ಬಿ.ವೈ. ರಾಘವೇಂದ್ರ ಆಗ್ರಹ

ತೇವರತೆಪ್ಪ ಗ್ರಾಮದಲ್ಲಿ ಮರಗಳ ತೆರವು ಖಂಡಿಸಿ ಬಿಜೆಪಿ ಪ್ರತಿಭಟನೆ

ಸೊರಬ: ತಾಲೂಕಿನ ಆನವಟ್ಟಿ ಹೋಬಳಿಯ ತೇವರತೆಪ್ಪ ಗ್ರಾಮದಲ್ಲಿ ರೈತರು ಸುಮಾರು 15 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ, ಫಸಲು ನೀಡುತ್ತಿದ್ದ ಅಡಿಕೆ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ತೀವ್ರ ನೋವು ತಂದಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ರೈತ ಕುಟುಂಬಗಳ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿದ್ದ ಅಡಿಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ಕಡಿದು ಹಾಕಿರುವುದರಿಂದ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ವರ್ಷಗಳ ಕಾಲ ಶ್ರಮವಹಿಸಿ, ಬೆವರು ಸುರಿಸಿ ಬೆಳೆಸಿದ ಫಸಲು ನೀಡುತ್ತಿದ್ದ ಮರಗಳನ್ನು ಕಳೆದುಕೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಸೊರಬ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತೇವರತೆಪ್ಪ ಗ್ರಾಮದಲ್ಲಿ ನಡೆದಿರುವ ಅಡಿಕೆ ಮರಗಳ ತೆರವು ಪ್ರಕರಣದ ಕುರಿತು ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು. ರೈತರಿಗೆ ಆಗಿರುವ ನಷ್ಟವನ್ನು ಸಮರ್ಪಕವಾಗಿ ಅಂದಾಜಿಸಿ ಸೂಕ್ತ ಪರಿಹಾರ ನೀಡುವ ಮೂಲಕ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ರೈತರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು. ಅವರ ಬದುಕು ಮತ್ತು ಜೀವನೋಪಾಯದ ರಕ್ಷಣೆಗೆ ಬಿಜೆಪಿ ಸದಾ ಬದ್ಧವಾಗಿದೆ ಎಂದು ಅವರು ಹೇಳಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.