ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ. ಅವರಿಗೆ ಐಎಂಎ ಕರ್ನಾಟಕ ರಾಜ್ಯ ಶಾಖೆಯ ಸಾರ್ವಜನಿಕ ಸೇವಾ ಪ್ರಶಸ್ತಿ

ಶಿವಮೊಗ್ಗ: ಪರಿಸರ ಸಂರಕ್ಷಣೆ ಹಾಗೂ ಜಲಸಂರಕ್ಷಣಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಪರಿಸರ ತಜ್ಞ ಹಾಗೂ ಪರ್ಯಾವರಣ ಟ್ರಸ್ಟ್‌ನ ಸಂಚಾಲಕ ಡಾ. ಶ್ರೀಪತಿ ಎಲ್.ಕೆ. ಅವರು 2026ನೇ ಸಾಲಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಕರ್ನಾಟಕ ರಾಜ್ಯ ಶಾಖೆಯ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪರಿಸರ ಸಂರಕ್ಷಣೆ, ಜಲಸಂರಕ್ಷಣೆ ಸೇರಿದಂತೆ ಪ್ರಕೃತಿ ಮತ್ತು ಸಮಾಜದ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಶ್ರೀಪತಿ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶಿವಮೊಗ್ಗ ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಕಳೆದ ಹಲವು ವರ್ಷಗಳಿಂದ ಪ್ರಚಾರದ ಹಂಗಿಲ್ಲದೆ ಎಲೆಮರೆಯ ಕಾಯಿಯಂತೆ ಪರಿಸರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು, ಪ್ರಕೃತಿ ಸಂರಕ್ಷಣೆ ಹಾಗೂ ಜಲಸಂಪನ್ಮೂಲಗಳ ರಕ್ಷಣೆಯ ಮಹತ್ವವನ್ನು ಸಾರುತ್ತಾ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಅಕ್ಟೋಬರ್ 24ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

ಸಮಾಜಮುಖಿ ಸೇವೆ ಹಾಗೂ ಪರಿಸರ ಕಾಳಜಿಯ ಮೂಲಕ ಗುರುತಿಸಿಕೊಂಡಿರುವ ಡಾ. ಶ್ರೀಪತಿ ಎಲ್.ಕೆ. ಅವರಿಗೆ ರಾಜ್ಯಮಟ್ಟದ ಗೌರವ ಲಭಿಸುತ್ತಿರುವುದು ಪರಿಸರ ಪ್ರೇಮಿಗಳು ಹಾಗೂ ಶಿವಮೊಗ್ಗದ ಜನರಲ್ಲಿ ಸಂತಸ ಮೂಡಿಸಿದೆ.

ಪರಿಸರ ಸಂರಕ್ಷಣೆಯ ಸೇವೆಗೆ ಸಂದ ಈ ಗೌರವಕ್ಕಾಗಿ ಡಾ. ಶ್ರೀಪತಿ ಎಲ್.ಕೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.