ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ: ಬೆಳೆ ಸಮೀಕ್ಷೆಯ ಲೋಪದೋಷ ಸರಿಪಡಿಸಲು ರೈತ ಮೋರ್ಚಾ ಮನವಿ
ಶಿವಮೊಗ್ಗ: ಮಳೆಯ ಕೊರತೆಯಿಂದ ಶಿವಮೊಗ್ಗ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗುಂದಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳೆ ಸಮೀಕ್ಷೆಯಲ್ಲಿ ಹಲವು ಲೋಪದೋಷಗಳು ಕಂಡುಬರುತ್ತಿವೆ. ಮಳೆಯ ಅಭಾವದಿಂದ ಬೆಳೆ ಒಣಗಿರುವ ಅಥವಾ ಕೃಷಿ ಮಾಡಲಾಗದೆ ಖಾಲಿ ಉಳಿದಿರುವ ಜಮೀನುಗಳನ್ನು ಸಮೀಕ್ಷೆಯಲ್ಲಿ ‘ಬೀಳುಭೂಮಿ’ ಎಂದು ತಪ್ಪಾಗಿ ನಮೂದಿಸಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ರೈತ ಮೋರ್ಚಾ ಆರೋಪಿಸಿದೆ.
ಇಂತಹ ತಪ್ಪು ಮಾಹಿತಿ ದಾಖಲಾಗುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಬೆಳೆ ವಿಮೆ ಹಾಗೂ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಮತ್ತು ಇತರ ಸೌಲಭ್ಯಗಳು ಕೈತಪ್ಪುವ ಸಾಧ್ಯತೆ ಇದೆ. ಹೀಗಾಗಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿಯನ್ನು ದಾಖಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮೋರ್ಚಾ ಆಗ್ರಹಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯ್ಡು, ಗಣೇಶ್ ಬಿಳಕಿ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಸದಸ್ಯರಾದ ಕರಬಸಪ್ಪ, ನಿಕಟಪೂರ್ವ ಅಧ್ಯಕ್ಷ ಹಾಗೂ ವಿಭಾಗ ಪ್ರಭಾರಿ ಟಿ.ಡಿ. ಮೇಘರಾಜ್, ಶಿಕಾರಿಪುರ ತಾಲೂಕು ಅಧ್ಯಕ್ಷ ಯೋಗೀಶ್, ರೈತ ಮುಖಂಡರಾದ ಮಲ್ಲಿಕಾರ್ಜುನ್, ಕಾಂತರಾಜು, ಚೇತನ್ ಕುಮಾರ್, ಮಹೇಶ್, ಗುರುರಾಜ್ ಜತ್ತಿನಕೊಪ್ಪ, ದಾನವಾಡಿ ಜಯಣ್ಣ, ಚಂದ್ರಶೇಖರ್ ಜಾದವ್ ಸೇರಿದಂತೆ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Leave a Comment