ಜಯ ಕರ್ನಾಟಕ ಸಂಘಟನೆಯ ಜನಪರ ಹೋರಾಟಕ್ಕೆ ಮೊದಲ ಯಶಸ್ಸು
ಪ್ರಯಾಣಿಕರಿಗೆ ತೊಂದರೆ ನೀಡಿದ ದುರ್ಗಾಂಬಾ ಮೋಟಾರ್ಸ್ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ
ತೀರ್ಥಹಳ್ಳಿ: ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಗಳ ವಿರುದ್ಧ ಜಯ ಕರ್ನಾಟಕ ಸಂಘಟನೆ ನಡೆಸಲು ಉದ್ದೇಶಿಸಿದ್ದ ಹೋರಾಟಕ್ಕೆ ಮೊದಲ ಯಶಸ್ಸು ದೊರೆತಿದೆ. ಶಿವಮೊಗ್ಗದಿಂದ ರಾತ್ರಿ 10 ಗಂಟೆಗೆ ಹೊರಡುವ ದುರ್ಗಾಂಬಾ ಮೋಟಾರ್ಸ್ ಬಸ್ನ ಚಾಲಕರು, ನಿರ್ವಾಹಕರು ಹಾಗೂ ಏಜೆಂಟರ ವಿರುದ್ಧ ಸಾರಿಗೆ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡಿದೆ ಎಂದು ಸಂಘಟನೆ ತಿಳಿಸಿದೆ.
ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಅಕ್ಟೋಬರ್ 19ರಂದು ಪ್ರಯಾಣಿಕರ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿತ್ತು. ಆದರೆ, ಹೋರಾಟಕ್ಕೂ ಮುನ್ನವೇ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮುರುಗೇಶ್ ಬಿ. ಶಿರೋಳ್ಕರ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಈ ಕ್ರಮವು ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ರಾತ್ರಿ ವೇಳೆ ಬಸ್ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು, ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಎದುರಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಘಟನೆ ಹೋರಾಟಕ್ಕೆ ಮುಂದಾಗಿತ್ತು. ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವುದು, ನಿಗದಿತ ನಿಲ್ದಾಣಗಳಲ್ಲಿ ಬಸ್ಗಳನ್ನು ನಿಲ್ಲಿಸುವುದು ಹಾಗೂ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುವುದು ಸಂಘಟನೆಯ ಪ್ರಮುಖ ಬೇಡಿಕೆಗಳಾಗಿವೆ.
ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಜನರ ಹಿತಕ್ಕಾಗಿ ಜಯ ಕರ್ನಾಟಕ ಸಂಘಟನೆ ನಿರಂತರವಾಗಿ ಹೋರಾಟ ಮುಂದುವರಿಸಲಿದೆ ಎಂದು ತಾಲ್ಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್ ತಿಳಿಸಿದ್ದಾರೆ.
— ಜಯ ಕರ್ನಾಟಕ ಸಂಘಟನೆ, ತೀರ್ಥಹಳ್ಳಿ ತಾಲ್ಲೂಕು ಘಟಕ

Leave a Comment