ಮನೆಯಂಗಳದಲ್ಲಿ ಕೈತೋಟ ನಿರ್ಮಾಣ: ರೈತ ಮಹಿಳೆಯರಿಗೆ ಮಾಹಿತಿ
ಶಿವಮೊಗ್ಗ; ಮನೆಯಂಗಳದಲ್ಲಿಯೇ ತರಕಾರಿಗಳನ್ನು ಬೆಳೆಸುವ ಮೂಲಕ ಕುಟುಂಬಕ್ಕೆ ತಾಜಾ ಮತ್ತು ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ ಮನೆಯ ಖರ್ಚನ್ನು ಕಡಿಮೆ ಮಾಡಬಹುದು ಎಂದು ತಿಳಿಸುವ ಉದ್ದೇಶದಿಂದ ಶಿವಮೊಗ್ಗ ತಾಲೂಕಿನ ಭೈರನಕೊಪ್ಪ ಗ್ರಾಮದಲ್ಲಿ ರೈತ ಮಹಿಳೆಯರು ಹಾಗೂ ಗ್ರಾಮಸ್ಥರಿಗೆ ಕೈತೋಟ ನಿರ್ಮಾಣದ ಕುರಿತು ಮಾಹಿತಿ ನೀಡಲಾಯಿತು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು, ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಅವರ ಮಾರ್ಗದರ್ಶನದಲ್ಲಿ ಕೈತೋಟ ನಿರ್ಮಾಣದ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಮನೆಯಂಗಳದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುವ ವಿಧಾನ, ಸಾವಯವ ಗೊಬ್ಬರಗಳ ಬಳಕೆ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮನೆಯ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಸುವ ಕುರಿತು ವಿವರಿಸಲಾಯಿತು. ಕಡಿಮೆ ಜಾಗದಲ್ಲಿಯೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೈತೋಟ ನಿರ್ಮಿಸಬಹುದು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.
ಕೈತೋಟದಿಂದ ಕುಟುಂಬಕ್ಕೆ ತಾಜಾ, ಪೌಷ್ಟಿಕ ಹಾಗೂ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಬೆಳೆದ ತರಕಾರಿಗಳು ದೊರೆಯಲು ನೆರವಾಗುತ್ತದೆ. ಅಲ್ಲದೆ, ಮಾರುಕಟ್ಟೆಯಿಂದ ತರಕಾರಿ ಖರೀದಿಸುವ ವೆಚ್ಚವನ್ನು ತಗ್ಗಿಸುವುದರ ಜೊತೆಗೆ ಮನೆಯ ಹಸಿ ತ್ಯಾಜ್ಯದ ಸಮರ್ಪಕ ನಿರ್ವಹಣೆಗೂ ಸಹಕಾರಿಯಾಗುತ್ತದೆ ಎಂದು ತಿಳಿಸಲಾಯಿತು.
ಈ ಕಾರ್ಯಕ್ರಮದ ಮೂಲಕ ರೈತ ಮಹಿಳೆಯರು ಹಾಗೂ ಗ್ರಾಮಸ್ಥರಲ್ಲಿ ಮನೆಯಂಗಳದಲ್ಲಿ ಕೈತೋಟ ನಿರ್ಮಿಸುವ ಆಸಕ್ತಿ ಬೆಳೆಸುವ ಮತ್ತು ಪೌಷ್ಟಿಕ ಆಹಾರ ಉತ್ಪಾದನೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

Leave a Comment