ಆರೋಗ್ಯಕರ ಸಮಾಜಕ್ಕೆ ಶುದ್ಧ ಹಾಲು ಉತ್ಪಾದನೆ ಅಗತ್ಯ: ಚಿಕ್ಕಮರಸದಲ್ಲಿ ಕೃಷಿ ವಿದ್ಯಾರ್ಥಿಗಳ ಜಾಗೃತಿ

ಶಿವಮೊಗ್ಗ: ಆರೋಗ್ಯಕರ ಸಮಾಜ ನಿರ್ಮಾಣ ಹಾಗೂ ರೈತರ ಆರ್ಥಿಕ ಪ್ರಗತಿಗೆ ಗುಣಮಟ್ಟದ ಮತ್ತು ಶುದ್ಧ ಹಾಲು ಉತ್ಪಾದನೆ ಅತ್ಯಗತ್ಯ ಎಂದು ಕೃಷಿ ವಿದ್ಯಾರ್ಥಿ ದರ್ಶನ್ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಚಿಕ್ಕಮರಸ ಗ್ರಾಮದಲ್ಲಿ ಅಕ್ಟೋಬರ್ 8ರಂದು ಶುದ್ಧ ಹಾಲು ಉತ್ಪಾದನೆ ಕುರಿತು ಗುಂಪು ಚರ್ಚೆ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ದರ್ಶನ್, ಹಾಲಿನ ಗುಣಮಟ್ಟ ಕಾಪಾಡಲು ಹಾಲು ಕರೆಯುವ ಮೊದಲು ಕೊಟ್ಟಿಗೆಯ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಹಸುವಿನ ಕೆಚ್ಚಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ, ಹಾಲು ಕರೆಯುವಾಗ ಪೂರ್ಣ ಹಸ್ತದ ಕರೆಯುವ ಪದ್ಧತಿಯನ್ನು ಅನುಸರಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಶುದ್ಧ ಹಾಲು ಉತ್ಪಾದನೆಯ ಮೂಲಕ ಗ್ರಾಹಕರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ರೈತರು ಗುಣಮಟ್ಟದ ಹಾಲು ಉತ್ಪಾದಿಸಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿದೆ. ಹೀಗಾಗಿ ಹೈನುಗಾರಿಕೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ 30ಕ್ಕೂ ಹೆಚ್ಚು ರೈತರು, ಮಹಿಳೆಯರು ಹಾಗೂ ಸ್ಥಳೀಯರು ಭಾಗವಹಿಸಿ ಶುದ್ಧ ಹಾಲು ಉತ್ಪಾದನೆಯ ಕುರಿತು ಮಾಹಿತಿ ಪಡೆದುಕೊಂಡರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.