ಸೊರಬದ: ದೊಡ್ಡಗುಂಡಿ ಬಳಿ*ಸಿಡಿಲು ಬಡಿದು 8 ಕುರಿಗಳು ಸಾವು*
ಸೊರಬ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ಭಾರಿ ಮಳೆಯ ನಡುವೆ ಸಿಡಿಲು ಬಡಿದು ಎಂಟು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ತಾಲೂಕಿನ ಉಳವಿ ಹೋಬಳಿ ಕಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾನಹಳ್ಳಿ ಗ್ರಾಮದ ದೊಡ್ಡಗುಂಡಿ ಬಸಪ್ಪ, ಸಾವಿತ್ರಮ್ಮ, ರವಿ ಹಾಗೂ ಅಣ್ಣಪ್ಪ ಎಂಬುವರಿಗೆ ಸೇರಿದ ಕುರಿಗಳನ್ನು ಎಂದಿನಂತೆ ದೊಡ್ಡಗುಂಡಿ ಬಳಿ ಮೇಯಿಸಲು ಬಿಡಲಾಗಿತ್ತು. ಸಂಜೆ ವೇಳೆಗೆ ಕುರಿಗಳಿಗೆ ಮೇವು ಹಾಕಿ ಮಾಲೀಕರು ಮನೆಗೆ ತೆರಳಿದ್ದರು. ಆದರೆ ರಾತ್ರಿಯಾಗುತ್ತಿದ್ದಂತೆ ಬಿರುಗಾಳಿ ಸಹಿತ ಭಾರಿ ಮಳೆ ಆರಂಭವಾಗಿದ್ದು, ಇದೇ ವೇಳೆ ಅಪ್ಪಳಿಸಿದ ಭಾರೀ ಸಿಡಿಲಿನ ಹೊಡೆತಕ್ಕೆ ಸಿಲುಕಿ ಎಂಟು ಕುರಿಗಳು ಸ್ಥಳದಲ್ಲೇ ಪ್ರಾಣಬಿಟ್ಟಿವೆ.
ಮೃತಪಟ್ಟ ಕುರಿಗಳ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಬಸಪ್ಪ ಅವರ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು (ಆರ್.ಐ) ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಉಳವಿ ಪಶು ಆಸ್ಪತ್ರೆಯ ವೈದ್ಯ ಡಾ. ಶೈಲೇಶ್ ಬಿ ಅವರು ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಸಂಭವಿಸಿದ ಈ ನೈಸರ್ಗಿಕ ವಿಕೋಪದಿಂದಾಗಿ ಕುರಿ ಸಾಕಾಣಿಕೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ತೀವ್ರ ಆಘಾತಕ್ಕೆ ಒಳಗಾಗಿದೆ. ಕುರಿಗಳ ಸಾವಿನಿಂದ ಅಪಾರ ಆರ್ಥಿಕ ನಷ್ಟ ಅನುಭವಿಸಿರುವ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಹಾಗೂ ತಾಲ್ಲೂಕು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಪರಿಹಾರ ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Comment