ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ನೀಡಿದ ಮಾಲೀಕನಿಗೆ ₹26,500 ದಂಡ

ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ನೀಡಿದ ವಾಹನದ ನೋಂದಾಯಿತ ಮಾಲೀಕರಿಗೆ ಶಿವಮೊಗ್ಗದ 4ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ₹26,500 ದಂಡ ವಿಧಿಸಿದೆ.

2026ರ ಅಕ್ಟೋಬರ್ 9ರಂದು ಸಂಜೆ 5:57ರ ಸಮಯದಲ್ಲಿ ಶಿವಮೊಗ್ಗ ನಗರದ ಆಲ್ಕೊಳ ವೃತ್ತದ ಬಳಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಸೂರ್ಯನಾಯ್ಕ (ಸಿಪಿಸಿ-1275) ಮತ್ತು ಮೊಹಮ್ಮದ್ ಫಾರೂಕ್ (ಸಿಪಿಸಿ-1371) ಅವರು ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ವಿನೋಬನಗರ ಪೊಲೀಸ್ ಚೌಕಿ ರಸ್ತೆ ಕಡೆಯಿಂದ ಆಲ್ಕೊಳ ವೃತ್ತದ ಕಡೆಗೆ ಬರುತ್ತಿದ್ದ ಕೆಎ-14 ಇಯು-6709 ನೋಂದಣಿ ಸಂಖ್ಯೆಯ ಟಿವಿಎಸ್ ಜುಪಿಟರ್ ಸ್ಕೂಟರ್ ಅನ್ನು ತಡೆದು ಪರಿಶೀಲಿಸಿದಾಗ, ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸುತ್ತಿರುವುದು ಕಂಡುಬಂದಿದೆ.

ವಾಹನದ ನೋಂದಾಯಿತ ಮಾಲೀಕರು ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ನೀಡಿರುವುದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 199(ಎ), 146, 196 ಹಾಗೂ 190(2) ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ಕಲಂ 115ರ ಅಡಿಯಲ್ಲಿ ಲಘು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 4ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ವಾಹನದ ನೋಂದಾಯಿತ ಮಾಲೀಕರಿಗೆ ₹26,500 ದಂಡ ವಿಧಿಸಿದೆ.

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಕಾನೂನುಬಾಹಿರವಾಗಿದ್ದು, ಪೋಷಕರು ಹಾಗೂ ವಾಹನ ಮಾಲೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಈ ಪ್ರಕರಣ ಮತ್ತೊಮ್ಮೆ ಎತ್ತಿಹಿಡಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.