ಆಟೋ ರಿಕ್ಲೋಸರ್ ಬಾಕ್ಸ್‌ನ ಬ್ಯಾಟರಿ, ಕಾಪರ್ ವೈರ್ ಕಳವು ಪ್ರಕರಣ: ಆರೋಪಿಗೆ ₹25 ಸಾವಿರ ದಂಡ
ಭದ್ರಾವತಿ: ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಣಭಘಟ್ಟ ಮುಖ್ಯ ರಸ್ತೆಯಲ್ಲಿರುವ ಹೊಳೆನೇರಳಕೆರೆ ಗ್ರಾಮದಲ್ಲಿ 2019ರಲ್ಲಿ ನಡೆದಿದ್ದ ವಿದ್ಯುತ್ ಉಪಕರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯವು ₹25 ಸಾವಿರ ದಂಡ ವಿಧಿಸಿದೆ.
2019ರ ಜೂನ್ 24ರಂದು ರಾತ್ರಿ, ಹೊಳೆನೇರಳಕೆರೆ ಗ್ರಾಮದ ಆಟೋ ರಿಕ್ಲೋಸರ್ ಕಂಟ್ರೋಲ್ ಬಾಕ್ಸ್‌ನೊಳಗೆ ಅಳವಡಿಸಿದ್ದ ನಾಲ್ಕು ಬ್ಯಾಟರಿಗಳು ಹಾಗೂ ಕಾಪರ್ ವೈರ್‌ಗಳನ್ನು ಆರೋಪಿ ಮಂಜುನಾಥ್ (40) ಕಳವು ಮಾಡಿಕೊಂಡು ಹೋಗಿದ್ದನು. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.153/2019, ಭಾರತೀಯ ದಂಡ ಸಂಹಿತೆ ಕಲಂ 379 ಹಾಗೂ ವಿದ್ಯುತ್ ಕಾಯ್ದೆಯ ಕಲಂ 136ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೇಶ್ ಕೆ.ಎಂ., ಪೊಲೀಸ್ ಇನ್ಸ್‌ಪೆಕ್ಟರ್ ಅವರು ತನಿಖೆ ಪೂರ್ಣಗೊಳಿಸಿ, ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸಲಾಯಿತು. ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮ ಪಿ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು
.
ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಎನ್. ಮುನಿರಾಜ ಅವರು ಆರೋಪಿಗೆ ₹25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಸಾದಾ ಕಾರಾಗೃಹವಾಸ ಅನುಭವಿಸುವಂತೆ ಶಿಕ್ಷೆ ವಿಧಿಸಲಾಗಿದೆ.

Leave a Comment