ವಿದ್ಯಾನಗರ ಮನೆ ಕಳ್ಳತನ ಪ್ರಕರಣ ಪತ್ತೆ: ₹1.02 ಕೋಟಿ ಮೌಲ್ಯದ ಚಿನ್ನಾಭರಣ, ನಗದು ವಶ

ಶಿವಮೊಗ್ಗ: ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಯಿಂದ ₹1,02,77,435 ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

2026ರ ಆಗಸ್ಟ್ 28ರಂದು ವಿದ್ಯಾನಗರದ ನಿವಾಸಿಯೊಬ್ಬರ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 943 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ₹86 ಸಾವಿರ ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.175/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 331(3), 305ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಹಾಗೂ ಕಳುವಾದ ಮಾಲನ್ನು ಪತ್ತೆಹಚ್ಚುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಅವರ ನಿರ್ದೇಶನದ ಮೇರೆಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಹಾಗೂ ಶಿವಮೊಗ್ಗ ಉಪವಿಭಾಗದ ಡಿವೈಎಸ್‌ಪಿ ಶೀಲವಂತ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಕೆ. ಪಟೇಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತನಿಖಾ ತಂಡವು ಆರೋಪಿತ ಮೊಹಮ್ಮದ್ ರಫೀಕ್ @ ಕರಿಯ, ಹಗರಿಬೊಮ್ಮನಹಳ್ಳಿ ನಿವಾಸಿ, ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದೆ.

ಆರೋಪಿಯಿಂದ ₹80,92,435 ಮೌಲ್ಯದ 558.099 ಗ್ರಾಂ ಚಿನ್ನಾಭರಣ, ₹20 ಲಕ್ಷ ನಗದು ಹಾಗೂ ₹1.85 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹1,02,77,435 ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ಕೋಟೆ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.