🚨 ಶಿವಮೊಗ್ಗದ ಹೋಂ ಗಾರ್ಡ್ ಚೀಲೂರು ಬಳಿ ಸಾವು ಅಪರಿಚಿತ ವಾಹನ ಡಿಕ್ಕಿ; ಹಿಟ್ ಆ್ಯಂಡ್ ರನ್ ಶಂಕೆ
ಶಿವಮೊಗ್ಗ: ಕರ್ತವ್ಯ ಮುಗಿಸಿಕೊಂಡು ಪತ್ನಿಯನ್ನು ಭೇಟಿ ಮಾಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಹೋಂ ಗಾರ್ಡ್ ಒಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಚೀಲೂರು–ಹೊಸಮಳಲಿ ಮಧ್ಯೆ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಜಯಂತಿ ಗ್ರಾಮದ ಆರ್. ನಂದೀಶ್ ಎಂದು ಗುರುತಿಸಲಾಗಿದೆ. ಇವರು ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯ ಮುಗಿಸಿಕೊಂಡ ಬಳಿಕ ನಂದೀಶ್ ಅವರು ಹೊನ್ನಾಳಿ ಸಮೀಪದ ನೇರಲಗುಂಡಿ ಗ್ರಾಮದಲ್ಲಿರುವ ತಮ್ಮ ಪತ್ನಿಯನ್ನು ಭೇಟಿ ಮಾಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಚೀಲೂರು–ಹೊಸಮಳಲಿ ಮಧ್ಯೆ ಅಪರಿಚಿತ ವಾಹನವು ನಂದೀಶ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆ ಬದಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತದ ಬಳಿಕ ಡಿಕ್ಕಿ ಹೊಡೆದ ವಾಹನ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿದೆ. ಅಪಘಾತಕ್ಕೊಳಗಾದ ನಂದೀಶ್ ಅವರ ದ್ವಿಚಕ್ರ ವಾಹನ ಸ್ಥಳದಲ್ಲೇ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Leave a Comment