ದೇವಸ್ಥಾನಗಳ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ: ಆರೋಪಿ ಬಂಧನ
ಸೊರಬ: ತಾಲೂಕಿನ ಕುಂಬತ್ತಿ ಗ್ರಾಮದ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
2026ರ ಆಗಸ್ಟ್ 26ರಂದು ಕುಂಬತ್ತಿ ದುರ್ಗಾಂಬಾ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಸಿಆರ್ ನಂ.154/2026ರಂತೆ ಬಿಎನ್‌ಎಸ್ ಕಲಂ 305 ಹಾಗೂ 331(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆ ಹಾಗೂ ಕಳುವಾದ ಹಣದ ಕುರಿತು ತನಿಖೆ ನಡೆಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ಶಿಕಾರಿಪುರ ಉಪವಿಭಾಗದ ಡಿವೈಎಸ್‌ಪಿ ಕೇಶವ್ ಅವರ ನಿರ್ದೇಶನದಂತೆ ತಂಡ ರಚಿಸಲಾಗಿತ್ತು.
ಸೊರಬ ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ, ಸೊರಬ ಠಾಣೆಯ ಪಿಎಸ್‌ಐ ನವೀನ್ ಎಂ.ಹೆಚ್. ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ ಅವರನ್ನು ಒಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.
ತನಿಖೆಯ ವೇಳೆ ಶಿಕಾರಿಪುರ ತಾಲೂಕು ಪುಣೆದಹಳ್ಳಿ ಗ್ರಾಮದ 28 ವರ್ಷದ ರಾಕೇಶ್ ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತ ರಾಕೇಶ್ ನವೀನ್ ಅಲಿಯಾಸ್ ದುರ್ಗ ಎಂಬಾತನೊಂದಿಗೆ ಸೇರಿಕೊಂಡು ಸೊರಬ ತಾಲೂಕಿನ ಕುಂಬತ್ತಿ ದುರ್ಗಾಂಬಾ ದೇವಸ್ಥಾನ, ಜಂಬಾನಿ ಮಾರಿಕಾಂಬ ದೇವಸ್ಥಾನ ಹಾಗೂ ಶಿರಾಳಕೊಪ್ಪದ ಬಸನಂದಿಹಳ್ಳಿ ಚನ್ನಬಸವ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹಾಗೂ ಕಳುವಾದ ಹಣದ ಪತ್ತೆ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ

Leave a Comment