ಶಿವಮೊಗ್ಗದಲ್ಲಿ ಶಾಂತಿ ಸಮಿತಿ ಸಭೆ : ಶಾಂತಿ-ಸೌಹಾರ್ಧತೆಯಿಂದ ಗಣೇಶೋತ್ಸವ ಆಚರಿಸಲು ಮನವಿ

ಶಿವಮೊಗ್ಗ  : ಸೆಪ್ಟಂಬರ್‌ 14ರಂದು ಜಿಲ್ಲೆಯಾದ್ಯಂತ ನಡೆಯಲಿರುವ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲಾಡಳಿತದ ವತಿಯಿಂದ ಏಕಗವಾಕ್ಷಿ ಪದ್ದತಿಯಲ್ಲಿ ನೀಡಲಾಗುವ ಅನುಮತಿಯಲ್ಲಿ ಪಡೆಯುವ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಹಾಗೂ ಫ್ಲೆಕ್ಸ್‌ ಅಳವಡಿಸಲು ವಿಧಿಸುವ ಶುಲ್ಕವನ್ನು ರದ್ದುಗೊಳಿಸುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಹೇಳಿದರು.

ಅವರು ಇತ್ತೀಚೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಕಾಲಕಾಲಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳು ಸಕಾಲಿಕವಾಗಿರಲಿವೆ ಎಂಬ ವಿಶ್ವಾಶ ತಮಗಿದೆ ಎಂದರು.

ದೇಶ ಒಟ್ಟಾಗಿ ಏಕತೆಯಿಂದ ಮುಂದೆ ಸಾಗಬೇಕೆನ್ನುವ ಸದಾಶಯದಿಂದ ನಾಡಿನೆಲ್ಲೆಡೆ ಗಣೇಶೋತ್ಸವಗಳು ನಡೆಯುತ್ತಿವೆ. ಹಬ್ಬದ ಸಂಭ್ರಮಾಚರಣೆಯು ಮುಕ್ತಾಯಗೊಳ್ಳುವವರೆಗೆ ನಗರಕ್ಕೆ ಕತ್ತಲೆ ಆವರಿಸದಂತೆ  ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಹೆಚ್ಚಿನ ಶುಲ್ಕ ವಿಧಿಸದಂತೆ ಮನವಿ ಮಾಡಿದ ಅವರು, ಗಣಪತಿ ಪ್ರತಿಷ್ಟಾಪನೆಗೆ ಜಿಲ್ಲಾಡಳಿತ ವಿಧಿಸುವ ನಿರ್ಬಂಧದಲ್ಲಿ ಸಡಿಲಿಕೆ ಮಾಡುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ನಗರದ ನ್ಯೂಮಂಡ್ಲಿ, ರೈಲ್ವೇ ನಿಲ್ದಾಣ ಮತ್ತು ಗೋಪಾಳದ ಮೆಸ್ಕಾಂ ಕಚೇರಿಗಳಲ್ಲಿ ಗಣಪತಿ ಪ್ರತಿಷ್ಟಾಪಿಸುವ ಸಂಘಗಳಿಗೆ ಅನುಕೂಲವಾಗುವಂತೆ ಮೂರು ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ಕೈಗೊಳ್ಳಲಾಗಿದ್ದು, ಅಗತ್ಯ ಸಿಬ್ಬಂಧಿಯನ್ನು ನಿಯೋಜಿಸಲಾಗುವುದು ಎಂದರು.

ನಗರದಲ್ಲಿ ಶಾಂತಿ-ಸೌಹಾರ್ಧತೆ ಕಾಪಾಡುವ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಟಾಪಿಸುವ ಸಂಘಗಳಿಗೆ ನಿಬಂಧನೆಗಳನ್ನು ವಿಧಿಸಿ ಆದೇಶಿಸಲಾಗಿದೆ. ಸಾರ್ವಜನಿಕರ ಕೋರಿಕೆಯ ಮೇರೆಗೆ ನಿಬಂಧನೆಗಳಲ್ಲಿ ಸಡಿಲಗೊಳಿಸಲು, ಫ್ಲೆಕ್ಸ್‌ ಅಳವಡಿಸಲು ವಿನಾಯಿತಿ ನೀಡಲು ಚರ್ಚಿಸಿ ಕ್ರಮ ವಹಿಸಲಾಗುವುದು. ಸಂಘಟಕರು ಪರಿಸರ ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಲು ಅವರು ಮನವಿ ಮಾಡಿದರು.

ಸಾರ್ವಜನಿಕ ವಲಯದಿಂದ ಬಂದಿರುವ ಸಲಹೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶಾಂತಿ ಸೌಹಾರ್ದತೆ ಕಾಪಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಜಿಲ್ಲಾಡಳಿತದೊಂದಿಗೆ ಸೌಹಾರ್ಧಯುತವಾಗಿ ಸಹಕರಿಸುವಂತೆ ಮನವಿ ಮಾಡಿದರು. 

- ನಗರದ 20ಕಡೆಗಳಲ್ಲಿ ಗಣಪತಿ ವಿಸರ್ಜನೆಗೆ ಕ್ರಮ ವಹಿಸಲಾಗಿದೆ. ಅದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಗಣೇಶ ವಿಸರ್ಜನೆಗೆ ಅನುಕೂಲವಾಗುವಂತೆ 35ವಾರ್ಡ್‌ಗಳಲ್ಲಿ ವಾಟರ್‌ ಟ್ಯಾಂಕ್‌ಗಳನ್ನು ನಿಯೋಜಿಸಿ, ವೇಳಾಪಟ್ಟಿಯನ್ನು ನಿಗಧಿಗೊಳಿಸಲಾಗಿದೆ. ಗಣೇಶ ವಿಸರ್ಜನೆ ಸ್ಥಳದಲ್ಲಿ ಮುಳುಗು ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುವುದ. ಅಲ್ಲದೇ ಬೋಟ್‌ ಮತ್ತು ಬೆಳಕಿನ ವ್ಯವಸ್ಥೆ, ಮಾಡಲಾಗಿದೆ. 

ಗಣಪತಿ ಪ್ರತಿಷ್ಟಾಪಿಸುವ ಸಂಘಗಳಿಗೆ ಅನುಮತಿ ನೀಡುವ ಅನುಕೂಲಕ್ಕಾಗಿ ನಗರದ ಮೂರು ಕಡೆಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದಲ್ಲದೇ ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು.
 - ಮಾಯಣ್ಣಗೌಡ, ಆಯುಕ್ತರು, ಮಹಾನಗರಪಾಲಿಕೆ, ಶಿವಮೊಗ್ಗ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಅವರು ಮಾತನಾಡಿ, ನಗರದ ಶಾಂತಿ-ಸೌಹಾರ್ಧತೆ ಕಾಪಾಡುವಲ್ಲಿ ಪೊಲೀಸ್‌ ಇಲಾಖೆಯು ಜಿಲ್ಲಾಡಳಿತ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ತಮ್ಮೆಲ್ಲರ ಸಹಕಾರದಿಂದ ಜಿಲ್ಲೆಯ ಶಾಂತಿ ಸೌಹಾರ್ಧ ವಾತಾವರಣ ನಿರ್ಮಿಸಲು ಸಾಧ್ಯವಾಗಿದೆ ಎಂದರು.

ಗಣೇಶ ಸಂಘಟನೆಗಳ ಮುಖ್ಯಸ್ಥರು ಡಿ.ಜೆ. ಸೌಂಡ್ಸ್‌ಗಳನ್ನು ಬಳಸುವ ಬದಲಾಗಿ ಸ್ಥಳೀಯ ಕಲಾವಿದರ, ಕಲಾತಂಡಗಳ ಸೇವೆಯನ್ನು ಬಳಸಿಕೊಳ್ಳಿ. ಇದರಿಂದಾಗಿ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅವಕಾಶ ದೊರೆಯಲಿವೆ. ಸಂಘಟಕರು ನೀಡುವ ಸಂಭಾವನೆಯಿಂದ ಕಲಾವಿದರ ನೆಮ್ಮದಿ ಜೀವನ ಸಾಗಲಿದೆ. ಅಲ್ಲದೆ ಮಾಲಿನ್ಯ ತಡೆಯಬಹುದಾಗಿದೆ, ರಾಜ್ಯದಲ್ಲಿ ಬರದ ಛಾಯೆ ಇದ್ದು, ಇದರಿಂದಾಗಿ ಸಾಮಾನ್ಯ ಜನರ ಜೀವನ ಸುಧಾರಣೆಗೆ ಅನುಕೂಲವಾಗಲಿದೆ. ಈ ವಿಷಯವನ್ನು ಅಳವಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮಗಳ ಆಯೋಜಕರು ಯಾವುದೇ ಸುಳ್ಳು ವದಂತಿ ಮತ್ತಿತರ ಘಟನೆಗಳಿಗೆ ಕಿವಿಯಾಗದಂತೆ ಹಾಗೂ ಯಾವುದೇ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಮುನ್ನ ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸುವಂತೆ ಅವರು ಮನವಿ ಮಾಡಿದರು.

ಕಿಡಿಗೇಡಿಗಳ ಕೃತ್ಯಗಳಿಂದಾಗಿ ಸಮಾಜದ ಮೇಲೆ ತೀವ್ರ ತರಹದ ಪರಿಣಾಮ ಬೀರುತ್ತಿದೆ. ಸಣ್ಣ ವಿಷಯಗಳೂ ಕೂಡ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದು ಸಲ್ಲದು. ಮಾಧ್ಯಮ/ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳು ಪ್ರೇರೇಪಿಸುತ್ತವೆ. ಇದರಿಂದಾಗಿ ಸಾಮಾನ್ಯ ಜನರ ಜೀವನ ದುಸ್ತರವಾಗುತ್ತದೆ ಮಾತ್ರವಲ್ಲ ಶಾಂತಿಭಂಗವಾಗುತ್ತಿದೆ. ಅಲ್ಲಲ್ಲಿ ಧರ್ಮನಿಂದೆಯ ಮಾತುಗಳು ಕೇಳಿ ಬರುತ್ತವೆ. ಇದನ್ನು ನಿಲ್ಲಿಸಿ, ಎಲ್ಲರೂ ಸೌಹಾರ್ಧಯುತವಾಗಿ ವರ್ತಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕ್ರಮ ಅಗತ್ಯ. ಸಿ.ಸಿ.ಕ್ಯಾಮರಾ ಅಳವಡಿಕೆ , ಪೊಲೀಸ್‌ ಗಸ್ತು ಅಗತ್ಯವಿದೆ.
- ಧೀರರಾಜ್‌ ಹೊನ್ನವಿಲೆ, ಶಿವಮೊಗ್ಗ.
-
ದೇಶದ ಸ್ವಾತಂತ್ರ್ಯೋತ್ಸವದಲ್ಲಿ ಸಾರ್ವಜನಿಕರು ಸಂಘಟಿತರಾಗಲು ಗಣೇಶೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಪರಿಪಾಠ ಬೆಳೆದುಬಂದಿದೆ. ಜಿಲ್ಲಾಡಳಿತ ವಿಧಿಸುವ ನಿಬಂಧನೆಗಳಿಗೆ ಸಡಿಲಿಕೆ ಕೊಡಿ. ಫ್ಲೆಕ್ಸ್‌, ಬಂಟಿಂಗ್‌, ಪೆಂಡಾಲ್‌ ಮತ್ತಿತರ ಕಾರಣಗಳಿಗಾಗಿ ಏಕಗವಾಕ್ಷಿ ಪದ್ದತಿಯಲ್ಲಿ ವಿಧಿಸಲಾಗುತ್ತಿರುವ ಶುಲ್ಕದಲ್ಲಿ ವಿನಾಯಿತಿ ಕೊಡಿ. ಛತ್ರಪತಿ ಶಿವಾಜಿ, ವೀರಸಾವರ್ಕರ್‌ ಸೇರಿದಂತೆ ರಾಷ್ಟ್ರ ನಾಯಕರ, ಆದರ್ಶವಾದಿಗಳ ಚಿತ್ರ ಪ್ರಕಟಿಸಲು ನಿರ್ಬಂಧ ಬೇಡ.
- ರಾಜೇಶ್‌ಗೌಡ, ಶಿವಮೊಗ್ಗ.
-
ಗಣಪತಿ ಪೆಂಡಾಲ್‌ಗಳಲ್ಲಿ ಪಾಲಿಕೆ ವತಿಯಿಂದ ಕ್ಯಾಮರಾಗಳನ್ನು ಅಳವಡಿಸಿ. ದೇಶ-ಧರ್ಮದ ಗೌರವ ಹೆಚ್ಚಿಸುವ ಕಾರ್ಯಕ್ಕೆ ಮೆಚ್ಚುಗೆ ಇರಲಿ. ಹೆಚ್ಚಿನ ಶುಲ್ಕ ವಿಧಿಸುವುದು ಬೇಡ.
- ಸುರೇಶ್‌ ಬಾಬು, ಶಿವಮೊಗ್ಗ.
-
ಗಣೇಶೋತ್ಸವ ಸೇರಿದಂತೆ ಎಲ್ಲಾ ಹಬ್ಬ ಹರಿದಿನಗಳಲ್ಲೂ ಭಜರಂಗದಳ, ವಿಶ್ವಹಿಂದೂ ಪರಿಷತ್ತಿನ ಎಲ್ಲಾ ಸದಸ್ಯರು ಸಮಾಜದಲ್ಲಿ ಶಾಂತಿ-ಸೌಹಾರ್ಧತೆ, ಸ್ವಚ್ಚತೆ ಕಾಪಾಡುವ ಬಗ್ಗೆ ಮಾಹಿತಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. 
- ರಮೇಶ್‌ ಬಾಬು, ಶಿವಮೊಗ್ಗ.
-
ಹಿಂದೂ ಬಾಂಧವರ ಹಬ್ಬದ ಸಂಭ್ರಮಾಚರಣೆ ಸಂತೋಷ ಸಡಗರಗಳಿಂದ ಕೂಡಿರಲಿ. ಮುಸ್ಲಿಂ ಸಮುದಾಯದ ಬಂಧುಗಳ ಸಹಕಾರ ಎಂದಿನಂತೆ ನಿರಂತರವಾಗಿರಲಿದೆ.
- ಅಬ್ದುಲ್‌ ರಜಾಕ್‌, ಶಿವಮೊಗ್ಗ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಕರ್ನಾಟಕ ರಾಜ್ಯ ಜವುಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ಚೇತನ್‌ಗೌಡ, ಡಿವೈಎಸ್ಪಿ ಕಾರಿಯಪ್ಪ ಸೇರಿದಂತೆ ವಿವಿಧ ಧರ್ಮ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.