ಈಡಿಗ ಸಮುದಾಯದ ಒಳಪಂಗಡಗಳು ಒಗ್ಗಟ್ಟಾಗಿ ಸಂಘಟಿತರಾಗಬೇಕು: ಒಗ್ಗಟ್ಟಿಗೆ ಪ್ರತಿಭಾ ಕರೆ
ಶಿಕಾರಿಪುರ: ಈಡಿಗ ಸಮುದಾಯದ ಎಲ್ಲ ಒಳಪಂಗಡಗಳು ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಿವಮೊಗ್ಗದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಿ.ಪಿ. ಪ್ರತಿಭಾ ಕರೆ ನೀಡಿದರು.
ಶಿಕಾರಿಪುರ ಪಟ್ಟಣದ ಪೌರವಿಹಾರದಲ್ಲಿ ಭಾನುವಾರ ನಡೆದ ಶ್ರೀ ನಾರಾಯಣಗುರು ಈಡಿಗರ ಬಳಗದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈಡಿಗ ಸಮುದಾಯದವರು ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಪೂಜಾರಿ, ಮಲೆನಾಡು ಭಾಗದಲ್ಲಿ ದೀವರು, ಶಿರಸಿ ಭಾಗದಲ್ಲಿ ನಾಮಧಾರಿ ನಾಯಕರು ಹಾಗೂ ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಈಡಿಗರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ಈಡಿಗರು ಒಗ್ಗಟ್ಟಾಗಿ ಸಂಘಟಿತರಾಗದಿದ್ದರೆ ಸಮುದಾಯವು ವಿಭಜನೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಒಳಪಂಗಡಗಳು ಒಂದಾಗಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕಿದೆ ಎಂದರು.
ಪ್ರಸ್ತುತ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಗಮನಾರ್ಹ. ಒಂದು ಅವಿಭಕ್ತ ಕುಟುಂಬದಂತೆ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯ. ಈಡಿಗ ಸಮಾಜ ಸ್ವಾಭಿಮಾನಿ ಹಾಗೂ ಪರಿಶ್ರಮಿ ಸಮಾಜವಾಗಿದ್ದು, ಇಂದು ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸಮುದಾಯದವರು ಗುರುತಿಸಿಕೊಂಡಿದ್ದಾರೆ. ಆದರೆ ಸಮುದಾಯದ ಹಿತ ಕಾಪಾಡುವುದೇ ಎಲ್ಲರ ಪ್ರಮುಖ ಗುರಿಯಾಗಬೇಕು ಎಂದು ಪ್ರತಿಭಾ ಹೇಳಿದರು.
ಮಲೆನಾಡಿನಲ್ಲಿ ಕೃಷಿಯೇ ಪ್ರಮುಖ ಜೀವನಾಧಾರವಾಗಿದ್ದು, ಅನೇಕರು ತಮ್ಮ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜವನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಚಾಮರಾಜ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ದೊರೆಯುವಂತೆ ಸಂಘಟನೆ ಕೆಲಸ ಮಾಡಬೇಕು. ನಮ್ಮ ಬಳಗ ಮತ್ತಷ್ಟು ಗಟ್ಟಿಯಾಗಿ ಬೆಳೆಯಬೇಕು. ವಿವಿಧ ಕ್ಷೇತ್ರಗಳಲ್ಲಿ ಈಡಿಗ ಸಮುದಾಯದವರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈಡಿಗ ಸಮಾಜ ಸದಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರು ಹಾಗೂ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮುಡುಭಾ ಸಿದ್ದಾಪುರ ಪ್ರಕಾಶ್, ಸಂಘದ ಪದಾಧಿಕಾರಿಗಳಾದ ಕೊಡಕಣಿ ದೇವರಾಜ್, ದುರ್ಗಪ್ಪ, ಜಯರಾಮ್, ದಾನಶೇಖರ್, ಕೃಷ್ಣಮೂರ್ತಿ, ಗೋಪಾಲಪ್ಪ, ನಾಗರಾಜ್ ಬೇಕರಿ, ರಾಮಚಂದ್ರಡು, ಬಸವರಾಜ್, ಪ್ರಭಾಕರ್, ವಿಜಯಕುಮಾರ್, ನಾಗರಾಜಪ್ಪ, ಜಗದೀಶ್, ರವಿಕುಮಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶಿಕಾರಿಪುರದಲ್ಲಿ ನಡೆದ ಈ ವಾರ್ಷಿಕ ಮಹಾಸಭೆ ಈಡಿಗ ಸಮುದಾಯದ ಒಗ್ಗಟ್ಟು, ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಬಲ ನೀಡುವ ಸಂದೇಶದೊಂದಿಗೆ ನಡೆಯಿತು.

Leave a Comment