ನಿವೃತ್ತ ಪಿಎಸ್‌ಐ ಹೆಚ್. ಚಂದ್ರಪ್ಪ ನಿಧನ | ಅನಾರೋಗ್ಯದಿಂದ ಹೃದಯ ಸ್ಥಂಭನ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ನಿವೃತ್ತ ಪಿಎಸ್‌ಐ ಶ್ರೀ ಹೆಚ್. ಚಂದ್ರಪ್ಪ ಅವರು ನಿಧನರಾಗಿದ್ದಾರೆ.
1952ರ ಜನವರಿ 1ರಂದು ಜನಿಸಿದ್ದ ಹೆಚ್. ಚಂದ್ರಪ್ಪ ಅವರು 1972ರ ಡಿಸೆಂಬರ್ 18ರಂದು ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಬಳಿಕ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2012ರ ಡಿಸೆಂಬರ್ 31ರಂದು ಸೇವೆಯಿಂದ ನಿವೃತ್ತರಾಗಿದ್ದರು.
ನಿವೃತ್ತಿಯ ಬಳಿಕ ಅವರು ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೆಪ್ಟೆಂಬರ್ 5ರಂದು ಮಧ್ಯಾಹ್ನ ಸುಮಾರು 12.45ರ ವೇಳೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸೊರಬದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ಚಿಕಿತ್ಸೆಯ ವೇಳೆ ಹೃದಯ ಸ್ಥಂಭನ ಸಂಭವಿಸಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಶ್ರೀಮತಿ ರಾದಮ್ಮ, ಮಕ್ಕಳಾದ ಯಶೋದಾ, ಹೇಮಂತ್ ಕುಮಾರ್, ಲೋಕೇಶ್ ಮತ್ತು ಲಕ್ಷ್ಮಣ್ ಕುಮಾರ್ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಚಂದ್ರಪ್ಪ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ನಿಗದಿಪಡಿಸಿದ್ದ ದೇಣಿಗೆಯನ್ನು ನೀಡಿದ್ದರು. ಅಲ್ಲದೆ, ಮುಂದೆಯೂ ಹೆಚ್ಚಿನ ಧನಸಹಾಯ ಮಾಡುವುದಾಗಿ ತಿಳಿಸಿದ್ದರು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಅವರ ಮೃತದೇಹವನ್ನು ಹಳೆ ಸೊರಬದ ಸ್ವಗೃಹದಲ್ಲಿ ಇರಿಸಲಾಗಿದ್ದು, ಸೆಪ್ಟೆಂಬರ್ 6ರಂದು ಬೆಳಗ್ಗೆ 10 ಗಂಟೆಯ ನಂತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಹೆಚ್. ಚಂದ್ರಪ್ಪ ಅವರ ನಿಧನಕ್ಕೆ ಪೊಲೀಸ್ ಇಲಾಖೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಇದು ಹಲೋ ಶಿವಮೊಗ್ಗ.

Leave a Comment