ಅಧಿಕಾರಿಗಳು ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ, ಸಂತೃಪ್ತ ಸೇವೆಯ ಆನಂದ ಪಡೆಯಿರಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್

ಶಿವಮೊಗ್ಗ : ಸೆಪ್ಟೆಂಬರ್ 12  : ನೋವು, ಸಂಕಷ್ಟ, ಸವಾಲು-ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮಲ್ಲಿಗೆ ಬರುವ ಮುಗ್ಧ ಜನರಿಗೆ ಅನಗತ್ಯವಾಗಿ ಅಲೆದಾಡಿಸದೆ ತಾಳ್ಮೆಯಿಂದ ಅವರ ಕೆಲಸ ಮಾಡಿಕೊಟ್ಟು ಸಂತ್ರಪ್ತ ಸೇವೆ ನೀಡಿದ ಆನಂದ ಪಡೆದುಕೊಳ್ಳುವಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾ ನಾಯ್ಕ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಶಿವಮೊಗ್ಗ ತಾಲೂಕಿನ ಹಾರ್ನಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಇದಾಗಿದ್ದು, ಅಧಿಕಾರಿಗಳು ಜನರ ಅಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಹಾಗೂ ಸಾರ್ವಜನಿಕರೊಂದಿಗೆ ಅಧಿಕಾರಯುತವಾಗಿ ದರ್ಪ ತೋರದೆ ಅವರ ಸಮಸ್ಯೆಗಳಿಗೆ ಸಕಾಲಿಕ ಹಾಗೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಸರ್ಕಾರವು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಸದುದ್ದೇಶದಿಂದ ಮಹತ್ವದ ಈ ಯೋಜನೆಯನ್ನು ಜಾರಿಗೊಳಿಸಿದೆ. ಹಾರನಹಳ್ಳಿ ಮತ್ತು ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಆಗಿದ್ದು, ಬಹುತೇಕ ಕೆರೆ, ಕಟ್ಟೆ ಕಾಲುವೆಗಳಲ್ಲಿ ನೀರು ಇಲ್ಲದಾಗಿದ್ದು, ಕುಡಿಯುವ ನೀರು,  ಜನ ಜಾನುವಾರುಗಳ ಸಾಕಣೆ ಮುಂದಿನ ದಿನಗಳಲ್ಲಿ ಕಷ್ಟಕರವಾಗಲಿದೆ. ಈ ತೀವ್ರತೆಯನ್ನು ಅರಿತು ನೀರಾವರಿ ಇಲಾಖೆಯ ಅಧಿಕಾರಿಗಳು ಏತ ನೀರಾವರಿ ಯೋಜನೆಗಳ ಮೂಲಕ ತ್ವರಿತವಾಗಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗುವಂತೆ ಸಲಹೆ ನೀಡಿದರು. 
ವಿಶೇಷವಾಗಿ ಅಧಿಕಾರಿಗಳು ಮಳೆ ಮಾಪನ ಕೇಂದ್ರ ನಿರ್ವಹಣೆ ಬಗ್ಗೆ ಗಮನಹರಿಸಿ. ರೈತರಿಗೆ ಬೆಳೆ ವಿಮೆ ಸೌಲಭ್ಯ ನೀಡುವಲ್ಲಿ ಮಳೆಮಾಪನ ಕೇಂದ್ರಗಳ ವರದಿಯೊಂದನ್ನೇ ಅಂತಿಮವಾಗಿ ಪರಿಗಣಿಸದಂತೆ ಸೂಚಿಸಿದ ಅವರು, ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಅಪರ  ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಸೀಲ್ದಾರ್ ರಾಜೀವ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಮಾಸಾಶನ, ಶಾಲೆಗೆ ಅಡುಗೆ ಕೋಣೆ, ರೈಲ್ವೆ ಸ್ಟೇಷನ್ ಗೆ ಬೆಳಕಿನ ವ್ಯವಸ್ಥೆ, ಬಾಕ್ಸ್ ಚರಂಡಿ, ಸ್ಮಶಾನ ಭೂಮಿ ಮಂಜೂರಾತಿ ಮುಂತಾದ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳು ಸಲ್ಲಿಕೆಯಾದವು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.