ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಮೋಹನಕುಮಾರ್ ಚಾಲನೆ-ಕ್ರೀಡೆಯಿಂದ ಬದುಕಲ್ಲಿ ಯಶಸ್ಸು ಸಾಧ್ಯ
ಶಿವಮೊಗ್ಗ,ಸೆ.30:ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಯ ಮೂಲಕ ಬೆಳೆದಾಗ ಬದುಕಲ್ಲಿ ಯಶಸ್ಸು ಹಾಗೂ ಸಾಧನೆ ಪಡೆಯಲು ಸಾಧ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.
ಅವರಿಂದ ಬೆಳಗ್ಗೆ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿವಮೊಗ್ಗ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಶಿವಮೊಗ್ಗ ತಾಲೂಕು ಮಟ್ಟದ 17 ವರ್ಷದೊಳಗಿನ ವಯೋಮಿತಿಯ ಪ್ರೌಢ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಿ, ಅನುದಾನಿತ, ಹಾಗೂ ಅನುದಾನ ರಹಿತ ಶಾಲೆಗಳ ಗುಂಪು ಕ್ರೀಡೆಗಳ ಸ್ಪರ್ಧೆ ಇದಾಗಿದ್ದು, ಇದರಲ್ಲಿ ಗೆದ್ದ ಮಕ್ಕಳು ಜಿಲ್ಲಾ ಮಟ್ಟಕ್ಕೆ ಹೋಗುತ್ತೀರಿ. ಆಸಕ್ತಿಯಿಂದ ಹಾಗೂ ವಿಶ್ವಾಸದಿಂದ ಆಟವಾಡಿ ಎಲ್ಲರಿಗೂ ಶುಭವಾಗಲಿ. ಸೋತಾಕ್ಷಣ ನಿರಾಶರಾಗದಿರಿ ಮುಂದೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಪ್ರಯತ್ನಿಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ವಹಿಸಿದ್ದು, ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಕೆ. ಎಸ್. ಸವಿತಾ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಸಹಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ತಾಲೂಕ್ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಂ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ, ತುಂಗಾತರಂಗ ದಿನಪತ್ರಿಕೆಯ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ನಿರಂಜನ್ ಮೂರ್ತಿ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಟಿ. ನಾಗರಾಜ್, ಅನುದಾನರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ, ಪ್ರಮುಖರಾದ ತೇಜಸ್ ಕುಮಾರ್, ದಾನಿಗಳಾದ ವಿನೋಬನಗರದ ಗಂಗಾಧರ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಾಳಾನಾಯ್ಕ್ ಎಸ್. ಸ್ವಾಗತಿಸಿದರು. ನಂದಿನಿ ಪ್ರಾರ್ಥಿಸಿದರು. ಖಜಾಂಚಿ ರುದ್ರಪ್ಪ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಉಲ್ಲತ್ತಿ ವಂದಿಸಿದರು.
Box
ಶಾಲೆಯ ಕ್ರೀಡಾ ಅವಧಿ ಸದ್ಬಳಕೆಗೆ ಬಿಇಓ ರಮೇಶ್ ಕರೆ
ಶಾಲೆಯಲ್ಲಿ ಪಾಠದ ಅವಧಿಯಂತೆ ಮೀಸಲಾಗಿರುವ ಕ್ರೀಡೆಯ ಅವಧಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುವಂತಹವರಾಗಿ.
ಪ್ರತಿ ದಿನ ಶಾಲೆಯ ಪಠ್ಯ ಬೋಧನೆಯ ಅವಧಿಯಂತೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳ ಕಲಿಯಲು ಅವಧಿಯನ್ನು ನೀಡಲಾಗಿದೆ. ಈ ಸಮಯವನ್ನು ಪಾಠ ಕಲಿಯುವಾಗ ತೋರುವ ಆಸಕ್ತಿಯಂತೆಯೇ ಬಳಸಿಕೊಳ್ಳುವ ಮೂಲಕ ಕ್ರೀಡೆಯಲ್ಲಿ ಉತ್ತಮ ವಾದ ಸಾಧನೆ ಯನ್ನು ಮಾಡಿ.
ಓದಿನ ಜೊತೆಗೆ ಕ್ರೀಡೆ ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ ಹಾಗೂ ಇನ್ನಷ್ಟು ಸಾಧನೆಗೆ ಮಾರ್ಗ ದರ್ಶನವಾಗುತ್ತದೆ.
- ರಮೇಶ್,
ಬಿ.ಇ.ಓ., ಶಿವಮೊಗ್ಗ

Leave a Comment