🌱 ಬಿತ್ತನೆಗೂ ಮುನ್ನ ಬೀಜ ಪರೀಕ್ಷೆ ಕಡ್ಡಾಯ!ಉತ್ತಮ ಇಳುವರಿಗೆ ರೈತರು ಏನು ಮಾಡಬೇಕು?

🌾 ಉತ್ತಮ ಇಳುವರಿಗೆ ಬೀಜ ಮೊಳಕೆ ಪರೀಕ್ಷೆ ಅನಿವಾರ್ಯ!
ಶಿವಮೊಗ್ಗ: ಬಿತ್ತನೆಗೂ ಮುನ್ನ ಬೀಜದ ಗುಣಮಟ್ಟವನ್ನು ಪರಿಶೀಲಿಸುವುದು ಉತ್ತಮ ಇಳುವರಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಬೀಜ ಮೊಳಕೆಯೊಡೆಯುವಿಕೆ ಪರೀಕ್ಷೆಯ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.
ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ರೈತರಿಗಾಗಿ ಈ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ಪವಿತ್ರ ಮಾತನಾಡಿ, ಬಿತ್ತನೆಗೂ ಮುನ್ನ ಬೀಜಗಳ ಗುಣಮಟ್ಟ ಮತ್ತು ಮೊಳಕೆಯೊಡೆಯುವ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಬೀಜ ಮೊಳಕೆ ಪರೀಕ್ಷೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಬೀಜ ಮೊಳಕೆ ಪರೀಕ್ಷೆ ನಡೆಸುವುದರಿಂದ ಒಂದು ಎಕರೆ ಪ್ರದೇಶಕ್ಕೆ ಅಗತ್ಯವಿರುವ ನಿಖರ ಬೀಜದ ಪ್ರಮಾಣವನ್ನು ಲೆಕ್ಕ ಹಾಕಬಹುದು. ಕಳಪೆ ಗುಣಮಟ್ಟದ ಬೀಜಗಳಿಂದ ಉಂಟಾಗಬಹುದಾದ ಹಣ, ಸಮಯ ಮತ್ತು ಶ್ರಮದ ನಷ್ಟವನ್ನು ಮುಂಚಿತವಾಗಿಯೇ ತಪ್ಪಿಸಬಹುದು. ಇದರ ಮೂಲಕ ಉತ್ತಮ ಮೊಳಕೆ ಹಾಗೂ ಅಂತಿಮವಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ 70ಕ್ಕೂ ಹೆಚ್ಚು ರೈತರು ಭಾಗವಹಿಸಿ ಬೀಜ ಮೊಳಕೆ ಪರೀಕ್ಷೆಯ ವಿಧಾನ ಮತ್ತು ಅದರ ಮಹತ್ವದ ಕುರಿತು ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳಾದ ವೈಷ್ಣವಿ ಎಂ.ಡಿ., ವೆಂಕಟೇಶ್, ಚೇತನ್, ಪ್ರಿಯಾ ಸೇರಿದಂತೆ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರೈತರು ಬಿತ್ತನೆಗೂ ಮುನ್ನ ಬೀಜದ ಗುಣಮಟ್ಟವನ್ನು ಪರೀಕ್ಷಿಸಿ, ಸೂಕ್ತ ಪ್ರಮಾಣದ ಬೀಜವನ್ನು ಬಳಸುವುದರಿಂದ ಬೆಳೆ ಉತ್ಪಾದನೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂಬ ಸಂದೇಶವನ್ನು ಈ ಪ್ರಾತ್ಯಕ್ಷಿಕೆ ನೀಡಿದೆ.
ಇದು ಹಲೋ ಶಿವಮೊಗ್ಗ. ಕೃಷಿ ಮತ್ತು ರೈತರ ಬದುಕಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮವರೊಂದಿಗೆ ಹಂಚಿಕೊಳ್ಳಿ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.