*ಚಿಕ್ಕಮರಸ ಗ್ರಾಮದಲ್ಲಿ 'ನೀರಿನ ಪರೀಕ್ಷೆಯ ಮಹತ್ವ' ಕುರಿತು ಕೃಷಿ ವಿದ್ಯಾರ್ಥಿಗಳಿಂದ ರೈತರೊಂದಿಗೆ ಸಂವಾದ*

ಉತ್ತಮ ಇಳುವರಿ ಪಡೆಯಲು ಕೇವಲ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಮಣ್ಣಿನ ಪರೀಕ್ಷೆ ಮಾಡಿದರೆ ಸಾಲದು, ಬೆಳೆಗಳಿಗೆ ಹಾಯಿಸುವ ನೀರಿನ ಗುಣಮಟ್ಟವನ್ನು ತಿಳಿಯುವುದು ಅತ್ಯಂತ ಅಗತ್ಯ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ಕೃಷಿ ಪದವಿ ವಿದ್ಯಾರ್ಥಿಗಳು ತಿಳಿಸಿದರು.
ಸಮೀಪದ ಕುಂಸಿ ಹೋಬಳಿಯ ಚಿಕ್ಕಮರಸ ಗ್ರಾಮದಲ್ಲಿ 'ಗ್ರಾಮೀಣ ಕೃಷಿ ಕಾರ್ಯಾನುಭವ'  ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 24ರಂದು ಆಯೋಜಿಸಲಾಗಿದ್ದ "ಕೃಷಿಯಲ್ಲಿ ನೀರು ಪರೀಕ್ಷೆಯ ಮಹತ್ವ" ಕುರಿತು ಆಯೋಜಿಸಿದ್ದ ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿಗಳು ರೈತರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ದರ್ಶನ್ ಜಿ ಆರ್  ಮಾತನಾಡಿ "ಮೇಲ್ನೋಟಕ್ಕೆ ಪಾರದರ್ಶಕವಾಗಿ ಮತ್ತು ಶುದ್ಧವಾಗಿ ಕಾಣುವ ನೀರು ಕೃಷಿಗೆ ಯೋಗ್ಯವಾಗಿರಲೇಬೇಕು ಎಂದೇನೂ ಇಲ್ಲ. ನೀರಿನಲ್ಲಿ ಕರಗಿರುವ ಅದೃಶ್ಯ ಲವಣಗಳು, ಆಮ್ಲೀಯತೆ ಮತ್ತು ಕ್ಷಾರೀಯತೆಯ ಮಟ್ಟ ವ್ಯತ್ಯಾಸವಾದರೆ ಬೆಳೆಗಳು ನಾಶವಾಗುವುದಲ್ಲದೆ, ಫಲವತ್ತಾದ ಭೂಮಿಯೂ ಬಂಜರಾಗುವ ಅಪಾಯವಿರುತ್ತದೆ. ಹೀಗಾಗಿ, ಯಾವುದೇ ಬೆಳೆ ಬಿತ್ತನೆ ಮಾಡುವ ಮುನ್ನ ಕಡ್ಡಾಯವಾಗಿ ನೀರಿನ ಪರೀಕ್ಷೆ ಮಾಡಿಸುವುದು  ಕೃಷಿಯ ಮೊದಲ ಆದ್ಯತೆಯಾಗಬೇಕು" ಎಂದು ರೈತರಿಗೆ ಜಾಗೃತಿ ಮೂಡಿಸಿದರು.
    ಇದೇ ವೇಳೆ ರೈತರಿಗೆ ಸೂಕ್ತ ರೀತಿಯಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸುವ ವಿಧಾನವನ್ನು ಮತ್ತು ಸಂಗ್ರಹಿಸುವ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿದ್ಯಾರ್ಥಿಗಳು ವಿವರಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮದ 20 ಕ್ಕೂ ಹೆಚ್ಚು ರೈತರು ಹಾಗೂ ವಿದ್ಯಾರ್ಥಿಗಳಾದ ವೆಂಕಟೇಶ್ , ನಂದಾ, ಪವಿತ್ರ, ಯಶ್ವಿತ್ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.