ಶಿವಮೊಗ್ಗದಲ್ಲಿ ಪತ್ನಿ ಕೊಲೆ ಪ್ರಕರಣ: ಪತಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ: ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿದೆ.
ಶಿವಮೊಗ್ಗ ನಗರದ ಟಿಪ್ಪುನಗರ ನಿವಾಸಿ ಅಬ್ದುಲ್ ಶೊಯೆಬ್, 26 ವರ್ಷ, ತನ್ನ ಪತ್ನಿ ಕೌಸರ್ ಫಿಜಾ, 20 ವರ್ಷ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಕೌಸರ್ ಫಿಜಾ ಮತ್ತು ಅಬ್ದುಲ್ ಶೊಯೆಬ್ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗುವಿತ್ತು. ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಆರೋಪಿತನೊಂದಿಗೆ ಕೌಸರ್ ಫಿಜಾ, “ನಾನು ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟುಬಿಡಿ” ಎಂದು ಹೇಳಿದ್ದರು ಎನ್ನಲಾಗಿದೆ.
ಇದರಿಂದ ಪತ್ನಿಯ ಮೇಲೆ ಅನುಮಾನಗೊಂಡಿದ್ದ ಅಬ್ದುಲ್ ಶೊಯೆಬ್, 2021ರ ಅಕ್ಟೋಬರ್ 16ರಂದು ಬಾಡಿಗೆ ಮನೆ ನೋಡಿಕೊಂಡು ಬರೋಣ ಎಂದು ಹೇಳಿ ಕಾರಿನಲ್ಲಿ ಆಕೆಯನ್ನು ಶಿವಮೊಗ್ಗಕ್ಕೆ ಕರೆತಂದಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ನಂತರ ಹಾಳೂರು–ಅನುಪಿನಕಟ್ಟೆ ರಸ್ತೆಯಲ್ಲಿರುವ ಹೊನ್ನಪ್ಪ ಲೇಔಟ್‌ಗೆ ಕರೆದುಕೊಂಡು ಹೋಗಿ, ಸಂಜೆ ಸುಮಾರು 5.15ರಿಂದ 5.45ರ ನಡುವೆ ಗಲಾಟೆ ಮಾಡಿ ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಮುಖ ಸೇರಿದಂತೆ ದೇಹದ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.
ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 341/2021, ಭಾರತೀಯ ದಂಡ ಸಂಹಿತೆಯ ಕಲಂ 498(ಎ) ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ತುಂಗಾನಗರ ಠಾಣೆಯ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಎಂ.ಎಸ್. ನಡೆಸಿ, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಪಿ.ಓ. ಪುಷ್ಪಾ ವಾದ ಮಂಡಿಸಿದ್ದರು.
ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ಅವರು 2026ರ ಸೆಪ್ಟೆಂಬರ್ 23ರಂದು ಅಬ್ದುಲ್ ಶೊಯೆಬ್‌ಗೆ ಕಲಂ 498(ಎ) ಮತ್ತು 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹2,10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದೇ ವೇಳೆ ನೊಂದ ಕುಟುಂಬದವರಿಗೆ ₹2,05,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಹಲೋ ಶಿವಮೊಗ್ಗ – ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಚಾನಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.

Leave a Comment