ಭದ್ರಾ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ತರಬೇತಿ ಕಾರ್ಯಾಗಾರ: ರೈತರು ಒಗ್ಗಟ್ಟಿನಿಂದ ಬೆಳೆ ಬೆಳೆಯಲು ಕಾಡಾ ಅಧ್ಯಕ್ಷ ಕೆ.ಪಿ. ಅಂಶುಮಂತ್ ಕರೆ
ಶಿವಮೊಗ್ಗ:ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕಾಡಾ ಕೇಂದ್ರ ಕಚೇರಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಸೆಪ್ಟೆಂಬರ್ 9ರಂದು ನಡೆದ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಭೂ ಅಭಿವೃದ್ಧಿ ಅಧಿಕಾರಿ ಡಾ. ನಾಗೇಶ್ ಎಸ್. ಡೋಂಗರೆ ಅವರು, ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಸಮಗ್ರ ತರಬೇತಿ ನೀಡಿದರು.
ನಂತರ ಕಾಡಾ ಅಧ್ಯಕ್ಷ ಕೆ.ಪಿ. ಅಂಶುಮಂತ್ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ, ಚನ್ನಗಿರಿ ಹಾಗೂ ಹರಿಹರ ತಾಲೂಕುಗಳ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಕೆ.ಪಿ. ಅಂಶುಮಂತ್, ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ರೈತರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ನೀರನ್ನು ಮಿತವಾಗಿ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಹಕಾರ ಸಂಘಗಳನ್ನು ವಿವಿಧೋದ್ದೇಶ ಸಂಘಗಳನ್ನಾಗಿ ಪರಿವರ್ತಿಸಿ, ಅವುಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಗರಿಷ್ಠವಾಗಿ ಪಡೆದುಕೊಳ್ಳಬೇಕು. ರೈತರೆಲ್ಲರೂ ಒಗ್ಗಟ್ಟಿನಿಂದ ಬೆಳೆ ಬೆಳೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಅರ್ಹ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಡಾ ಪ್ರಾಧಿಕಾರದ ವತಿಯಿಂದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಡಾ ಆಡಳಿತಾಧಿಕಾರಿ ಹಾಗೂ ಮುಖ್ಯ ಇಂಜಿನಿಯರ್ ಆರ್. ಸತೀಶ್, ಭೂ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಕೆ., ಉಪ ಆಡಳಿತಾಧಿಕಾರಿ ಶ್ರೀನಿವಾಸ್ ಚಿಂತಾಲ ಸೇರಿದಂತೆ ಕಾಡಾ ಅಧಿಕಾರಿಗಳು ಮತ್ತು ಸಿಬ್ಬಂದಿ, ದಾವಣಗೆರೆ ವಿಭಾಗದ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದು ಹಲೋ ಶಿವಮೊಗ್ಗ. ಇಂತಹ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮವರೊಂದಿಗೆ ಶೇರ್ ಮಾಡಿ.

Leave a Comment