ಮಹಿಳೆಗೆ ಕಿರುಕುಳ ನೀಡಿದ ಪ್ರಕರಣ: 6 ಜನ ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 1,14,000 ರೂ. ದಂಡ
ಶಿವಮೊಗ್ಗ: ಮಹಿಳೆಗೆ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳಿಗೆ 1 ವರ್ಷ ಸಾಧಾರಣ ಕಾರಾಗೃಹ ವಾಸ ಹಾಗೂ ಒಟ್ಟು 1,14,000 ರೂ. ದಂಡ ವಿಧಿಸಿ ಶಿವಮೊಗ್ಗದ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ತೀರ್ಪು ನೀಡಿದೆ.
ಪ್ರಕರಣದ ವಿವರ:
ಬಾಳೇಕೊಪ್ಪ ಗ್ರಾಮದ 32 ವರ್ಷದ ನೊಂದ ಮಹಿಳೆಗೆ ಸತೀಶ ಎಂಬ ವ್ಯಕ್ತಿಯು ಪ್ರೀತಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ನಡೆಸಿ ನಂತರ ಮದುವೆಯಾಗಿದ್ದನು. ಆದರೆ ಮದುವೆಯಾದ ನಂತರ ಸತೀಶ ಹಾಗೂ ಆತನ ಸಂಬಂಧಿಕರಾದ ಮಂಜುನಾಥ, ಹುಚ್ಚರಾಯ, ಮೇಘಾ, ಕುಮುದಾ ಮತ್ತು ಶೃತಿ ಎಂಬುವವರು ಸೇರಿಕೊಂಡು ಮಹಿಳೆಯನ್ನು ಮನೆಗೆ ಸೇರಿಸಿಕೊಳ್ಳದೆ, ಅಶ್ಲೀಲ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.
ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 236/2023 ರಂತೆ IPC ಕಲಂ 417, 376(2)(ಜ), 376(2)(ಐ), 323, 504, 506, 354, 447, 149 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದ ತೀರ್ಪು:
ಪ್ರಕರಣದ ತನಿಖಾಧಿಕಾರಿಯಾದ ಸಿಪಿಐ ಶ್ರೀ ಹರೀಶ್ ಕೆ. ಪಾಟೀಲ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಶ್ರೀ ಶ್ರೀಧರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ನಿಂಗನಗೌಡ ಭ ಪಾಟೀಲ್ ಅವರು ದಿನಾಂಕ 28-09-2026 ರಂದು ಆರೋಪಿಗಳಿಗೆ 1 ವರ್ಷ ಕಾರಾಗೃಹ ವಾಸ ಹಾಗೂ 1,14,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 1,40,000 ರೂ. ಪರಿಹಾರವನ್ನು ನೊಂದ ಮಹಿಳೆಗೆ ನೀಡುವಂತೆ ನ್ಯಾಯಾಲಯ ತಿಳಿಸಿದೆ.

Leave a Comment