ಭದ್ರಾವತಿಯಲ್ಲಿ ಜಂಟಿ ಕಾರ್ಯಾಚರಣೆ – 5 ಬಾಲ ಕಾರ್ಮಿಕರ ರಕ್ಷಣೆ!
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಾಲಕಾರ್ಮಿಕರ ವಿರುದ್ಧ ನಡೆಸಿದ ಜಂಟಿ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು ಐದು ಮಕ್ಕಳನ್ನು ರಕ್ಷಿಸಲಾಗಿದೆ.
ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಸೆಪ್ಟೆಂಬರ್ 9ರಂದು ಈ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಆಶ್ರಿತಾ ಸ್ವಯಂಸೇವಾ ಸಂಸ್ಥೆಯ ಸಿಬ್ಬಂದಿ ಜಂಟಿಯಾಗಿ ಭದ್ರಾವತಿ ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು, ಗ್ಯಾರೇಜುಗಳು ಮತ್ತು ಗ್ರಾಮೀಣ ಪ್ರದೇಶಗಳ ಅಲೆಮಾರಿ ತಾಣಗಳಲ್ಲಿ ಪರಿಶೀಲನೆ ನಡೆಸಿದರು.
ಈ ವೇಳೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂವರು ಬಾಲಕಾರ್ಮಿಕರು ಹಾಗೂ 18 ವರ್ಷದೊಳಗಿನ ಇಬ್ಬರು ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣವೇ ಐವರನ್ನೂ ಕೆಲಸದ ಸ್ಥಳದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ದಾಖಲಿಸಲಾಗಿದೆ.
ಇದೇ ವೇಳೆ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಎದುರಾಗುವ ಕಾನೂನು ಕ್ರಮಗಳ ಕುರಿತು ಮಾಲೀಕರಿಗೆ ಅಧಿಕಾರಿಗಳು ಅರಿವು ಮೂಡಿಸಿದರು.
ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.
ನಿಯಮ ಉಲ್ಲಂಘಿಸುವ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ದಂಡ, ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ಅಪರಾಧ ಪುನರಾವರ್ತನೆಯಾದರೆ 1ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇನ್ನು ರಕ್ಷಿಸಲ್ಪಟ್ಟ ಮಕ್ಕಳ ಪುನರ್ವಸತಿಗಾಗಿ, ತಪ್ಪಿತಸ್ಥ ಮಾಲೀಕರು ಪ್ರತಿಯೊಬ್ಬ ಮಗುವಿಗೆ 20 ಸಾವಿರ ರೂಪಾಯಿಗಳನ್ನು ಪುನರ್ವಸತಿ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ.
ಬಾಲಕಾರ್ಮಿಕರು ಕಂಡುಬಂದರೆ ಸಾರ್ವಜನಿಕರು ಪೊಲೀಸ್, ಕಾರ್ಮಿಕ, ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗೆ ದೂರು ನೀಡಬಹುದು.
ಮಕ್ಕಳ ಸಹಾಯವಾಣಿ – 1098
ಕಾರ್ಮಿಕರ ಸಹಾಯವಾಣಿ – 155214
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ – 080-22115291 / 92
ಮಕ್ಕಳನ್ನು ದುಡಿಮೆಗೆ ತಳ್ಳದೆ, ಅವರ ಶಿಕ್ಷಣ ಮತ್ತು ಭವಿಷ್ಯವನ್ನು ರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಭದ್ರಾವತಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಆಶ್ರಿತಾ ಸ್ವಯಂಸೇವಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

Leave a Comment