ದ್ವೇಷದ ವಿರುದ್ಧ ಪ್ರೀತಿಯ ಹೆಜ್ಜೆ ..ಶಿಕಾರಿಪುರದಲ್ಲಿ ಕಾಂಗ್ರೆಸ್‌ ಧ್ವನಿ ಮೊಳಗಿಸೋಣ-ಭಾರತ್‌ ಜೋಡೊ-2.0 ಯಾತ್ರೆಯಲ್ಲಿ ಹೆಜ್ಜೆ ಹಾಕೋಣ:ಜಿಲ್ಲಾಧ್ಯಕ್ಷ H.C.ಯೋಗಿಶ್

ದ್ವೇಷದ ವಿರುದ್ಧ ಪ್ರೀತಿಯ ಹೆಜ್ಜೆ ..
ಶಿಕಾರಿಪುರದಲ್ಲಿ ಕಾಂಗ್ರೆಸ್‌ ಧ್ವನಿ ಮೊಳಗಿಸೋಣ
ಭಾರತ್‌ ಜೋಡೊ-2.0 ಯಾತ್ರೆಯಲ್ಲಿ ಹೆಜ್ಜೆ ಹಾಕೋಣ
ಭಾರತ ಜೋಡೊ ಎಂಬ ಪದವೇ ಎಲ್ಲರೆದೆಯಲ್ಲಿ ಒಂದು ಭಾವನಾತ್ಮಕ ಬಂಧನದ ಅನುಭಾವ ನೀಡುತ್ತದೆ. ಜಾತ್ಯತೀತ ಸಿದ್ಧಾಂತದ  ತಳಹದಿಯ ಮೇಲೆ ರಚಿತವಾದ ಡಾ.ಬಾಬಾ ಸಾಹೇಬ್‌  ಅಂಬೇಡ್ಕರ್‌ ರಚಿತ ಸಂವಿಧಾನದ ಮೇಲೆ ನಡೆಯುತ್ತಿರುವ ಭವ್ಯ ಭಾರತವನ್ನು ಒಂದುಗೂಡಿಸುವ ಈ ಭಾರತ್‌ ಜೋಡೊ ಅಭಿಯಾನ ಬಿರಿದ ಮನಸುಗಳನ್ನು ಕೂಡಿಸುವ ಮತ್ತು ಆ ಮೂಲಕ ಅಖಂಡ ಭಾರತದಲ್ಲಿ ಒಂದು ಸೋದರತೆಯ ಭಾವ ಬಂಧನ ಬೆಸೆದ ಐತಿಹಾಸಿಕ ಯಾತ್ರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಬಲಿದಾನ ನೀಡಿದ ಕಾಂಗ್ರೆಸ್‌ ಪಕ್ಷದ ಪ್ರಶ್ನಾತೀತ ನಾಯಕ ರಾಹುಲ್‌ ಗಾಂಧಿಯವರ ನೇತೃತ್ವದ ಈ ಯಾತ್ರೆ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದ ತನಕ ದೇಶದ ಜನರನ್ನು ಒಗ್ಗೂಡಿಸಿದ ಮಹತ್ತರ ರಾಜಕೀಯ ಮೈಲುಗಲ್ಲು. ದೇಶವಾಸಿಗಳೆಲ್ಲ ಒಂದು ಎಂಬ ಬಂಧುತ್ವವನ್ನು ನಿರ್ಮಾಣ ಮಾಡಿದ ಐತಿಹಾಸಿಕ ಯಾತ್ರೆ. ಜಾತಿ, ಮತ, ಧರ್ಮವನ್ನು ಮೀರಿ ದೇಶವಾಸಿಗಳಲ್ಲಿ ಬ್ರಾತೃತ್ವದ ಭಾವನೆ ಮೂಡಿಸಿದ ಈ ಯಾತ್ರೆಗೆ ನಾಲ್ಕು ವರ್ಷ.
2022 ರ ಸೆಪ್ಟೆಂಬರ್‌ 7 ರಂದು ಕನ್ಯಾಕುಮಾರಿಯಲ್ಲಿ ರಾಹುಲ್‌ ಗಾಂಧಿಯವರು ಈ ಐತಿಹಾಸಿಕ ಪಾದಯಾತ್ರೆಗೆ ಚಾಲನೆ
 ನೀಡುತ್ತಾರೆ. ಒಟ್ಟಿಗೆ ನಡೆಯಿರಿ ದೇಶವನ್ನು ಒಂದುಗೂಡಿಸಿ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಪಾದಯಾತ್ರೆಯಲ್ಲಿ ಯುವ ನಾಯಕ ರಾಹುಲ್‌ ಗಾಂಧಿಯವರು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 3750 ಕೀಲೋ ಮೀಟರ್‌ ಕಾಲ್ನಡಿಗೆ ಮಾಡುತ್ತಾರೆ. ಈ ಅಭಿಯಾನದಲ್ಲಿ ಹರಿಯುವ ನದಿಗೆ ಸೇರಿದ ತೊರೆಗಳೆಷ್ಟೊ ಎಂಬಂತೆ ರಾಹುಲ್‌ ಗಾಂಧಿಯವರ ಪಾದಯಾತ್ರೆ ಉದ್ದಕ್ಕೂ ದೇಶವಾಸಿಗಳು ಅವರಿಗೆ ಬೆಂಬಲ ನೀಡುತ್ತಾರೆ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ರಾಹುಲ್‌ ಅವರು ಜನ ಪ್ರೀತಿಗೆ ಮಾರುಹೋಗುತ್ತಾರೆ. ಅಣ್ಣನೊಂದಿಗೆ ಹೆಜ್ಜೆ ಹಾಕಿದ ಸೋದರಿ ಪ್ರಿಯಾಂಕ ಗಾಂಧಿಯವರಲ್ಲಿ ಈ ದೇಶಕಂಡ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಕಾಣುತ್ತಾರೆ. ಅಜ್ಜಿಯ ಹಾದಿಯಲ್ಲಿ ಸಾಗುತ್ತಿರುವ ಮೊಮ್ಮಕ್ಕಳನ್ನು ಹರಸುತ್ತಾರೆ. ದೇಶದ ಉದ್ದಗಲಕ್ಕೂ ಸಂಚರಿಸಿದ  ರಾಹುಲ್‌ ಗಾಂಧಿಯವರು ರೈತರು, ಮಹಿಳೆಯರು, ಮಕ್ಕಳು, ಯುವಜನರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಸಂವಾದಗಳನ್ನು ನಡೆಸುತ್ತಾರೆ. ಸಾಮಾನ್ಯ ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸುತ್ತಾರೆ. ತಮ್ಮ ಪಕ್ಷದ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಾವೊಬ್ಬ ಹೃದಯವಂತ ರಾಜಕಾರಣಿ ಎಂಬುದನ್ನು ಸಾಬೀತು ಮಾಡುತ್ತಾರೆ. ಯುವಜನರೊಂದಿಗೆ ಮುಖಾಮುಖಿಯಾಗಿ ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ದೇಶದ ಸಾಮಾನ್ಯ ಜನರ ಹೃದಯಕ್ಕೆ ಮುಟ್ಟಿದ್ದ ಭಾರತ್‌ ಜೋಡೊ ಯಾತ್ರೆ ಕರ್ನಾಟಕ ಪ್ರವೇಶ ಮಾಡಿ ಈಗ ನಾಲ್ಕು ವರ್ಷಗಳಾಗಿವೆ. ಇದರ ಸ್ಮರಣಾರ್ಥ ಇದೇ ಸೆಪ್ಟೆಂಬರ್‌ 30 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಜ್ಯ ಮಟ್ಟದ ಭಾರತ್‌ ಜೋಡೊ ಯಾತ್ರೆ -2.0 ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್‌ನ ಕಟ್ಟಾಳು, ರಾಜಕೀಯ ಚಿಂತಕರೂ ಆದ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್‌ ಅವರ ಸಾರಥ್ಯದಲ್ಲಿ ಶಿಕಾರಿಪುರದಿಂದ ರಾಜ್ಯಮಟ್ಟದ ಯಾತ್ರೆ ಆರಂಭವಾಗಲಿದೆ. ರಾಜಕೀಯ ನೇತಾರ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪ ಅವರ ಸುಪುತ್ರರಾದ ಯಶಸ್ವೀ ಶಿಕ್ಷಣ ಸಚಿವ ಮತ್ತು ಯುವಜನರ ಕಣ್ಮಣಿ ಮಧುಬಂಗಾರಪ್ಪ ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರೆಯ ಮೂಲಕ ಶಿಕಾರಿಪುರ ಮತ್ತು ಸೊರಬ ತಾಲೂಕಿನ ಏತ ನೀರಾವರಿಗೆ ಅನುದಾನ ಮಂಜೂರು ಮಾಡಿಸಿದ್ದ, ಬಗರ್‌ ಹುಕುಂ ರೈತರಿಗೆ ರಕ್ಷಣೆ ನೀಡಿದ ಮತ್ತು ಶರಾವತಿ ಸಂತ್ರಸ್ತರ ಭೂಮಿ ಹಕ್ಕಿನ ಸಮಸ್ಯೆಯನ್ನು ತಾರ್ಕಿಕ ಹಂತಕ್ಕೆ ತಲುಪಿಸಿರುವ ಮಧುಬಂಗಾರಪ್ಪ ಅವರು ಪಾದಯಾತ್ರೆಯಲ್ಲಿ ಸಂಚಲನ ಮೂಡಿಸಲಿದ್ದಾರೆ.
ಚಳವಳಿಗಳ ತವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮ ಭಾರತದ ಮೊದಲ ಸ್ವತಂತ್ರ ಗ್ರಾಮವಾಗಿತ್ತು. ಈ ಸ್ವಾಭಿಮಾನಿ ನೆಲವನ್ನು ಹೊಂದಿರುವ ತಾಲೂಕಿನಿಂದ ಆರಂಭವಾಗುವ ಭಾರತ್‌ ಜೋಡೊ ಯಾತ್ರೆ ಒಡೆದು ಮನಸುಗಳನ್ನು ಬೆಸೆಯುವ ಒಂದು ಉದಾತ್ತ ಉದ್ದೇಶವನ್ನು ಹೊಂದಿದೆ. ಜಾತಿ, ಧರ್ಮ, ಮಠ, ಮಂದಿರ ಇಗರ್ಜಿಗಳ ಹೆಸರಲ್ಲಿ ಜನರನ್ನು ಒಳೆದು ಆಳುವ ಶಕ್ತಿಗಳ ಎದುರು ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ  ಈ ಪಾದಯಾತ್ರೆ ನಡೆಯಲಿದೆ. ಮೇಲು-ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಕೂಡಿ ಹೊಸನಾಡು ಕಟ್ಟುವ ಸಂಕಲ್ಪ ಮಾಡೋಣ ಬನ್ನಿ. ನಾವೆಲ್ಲರೂ ಭಾರತೀಯರು ಎಂಬ ಭಾವದೊಂದಿಗೆ ಒಟ್ಟಾಗಿ ಹೆಜ್ಜೆ ಹಾಕೋಣ, ಹೊಸ ಆಶಯಗಳ ನೆಮ್ಮದಿಯ ನಾಡು ಕಟ್ಟಿ ಜಗತ್ತಿಗೆ ಶಾಂತಿ ಸೌಹಾರ್ದತೆಯ ಸಂದೇಶ ಸಾರುತ್ತಾ ಅಭಿವೃದ್ಧಿಯ ಪಥದತ್ತ ಮುನ್ನಡೆಯೋಣ.

ಕೋಟ್ ಗಳು
ದ್ವೇಷ ಅಳಿಸಿ, ಸರ್ವರಿಗೂ ಸಮಪಾಲು, ಸಮಬಾಳು ಎಂಬ ಭಾವದಲ್ಲಿ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡೋಣ. ಜಾತಿ ಧರ್ಮಗಳ ಬೇಲಿ ದಾಟಿ ಅಭಿವೃದ್ಧಿಯ ಪಥದಲ್ಲಿ ಎಲ್ಲರೂ ಸಾಗೋಣ. ಈ ಸಂಕಲ್ಪಕ್ಕಾಗಿ ಎಲ್ಲರೂ ಶಿಕಾರಿಪುರದ ಪಾದಯಾತ್ರೆಯಲ್ಲಿ ಸೇರೋಣ ಬನ್ನಿ
-ಮಧು ಬಂಗಾರಪ್ಪ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ‌

ಭಾರತ್‌ ಜೋಡೋ ಯಾತ್ರೆ ಈ ದೇಶದ ಐತಿಹಾಸಿಕ ಪಾದಯಾತ್ರೆ. ಧರ್ಮಗಳ ನಡುವಿನ ಕಂದಕ ದೂರ ಮಾಡಿದ್ದ ಕೀರ್ತಿ ಇದಕ್ಕೆ ಸಲ್ಲುತ್ತದೆ. ರಾಹುಲ್‌ ಗಾಂಧಿಯವರ ಯಾತ್ರೆಯನ್ನು ಸ್ಮರಿಸಿ ಅದಕ್ಕೆ ಮತ್ತಷ್ಟ ಶಕ್ತಿ ತುಂಬುವ ಮತ್ತು ಆ ಮೂಲಕ ಹೆಚ್ಚು ಜನರನ್ನು ಒಳಗೊಳ್ಳುವ ಉದ್ದೇಶದಿಂದ ಶಿಕಾರಿಪುರದಿಂದ ಭಾರತ ಜೋಡೊ ಯಾತ್ರೆ ಆರಂಭವಾಗಲಿದೆ. ಹೋರಾಟದ ನೆಲ ಶಿವಮೊಗ್ಗ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ
-ಬಿ.ಕೆ.ಹರಿಪ್ರಸಾದ್‌, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್‌

ದೇಶದ ಯುವಜನರ ಹೋರಾಟದ ಪ್ರೇರಕ ಶಕ್ತಿ ರಾಹುಲ್‌ ಗಾಂಧಿಯವರು. ಅವರ ಸಾರಥ್ಯದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯನ್ನು ಸ್ಮರಿಸುತ್ತ ಬಹುಜನರ ಭಾರತ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕಿದೆ. ಈ ನೆಲೆಯಲ್ಲಿ ಜನರನ್ನು ಸಂಘಟಿಸಿ ಸಶಕ್ತ ಕರ್ನಾಟಕ ನಿರ್ಮಾಣಕ್ಕೆ ಹೆಜ್ಜೆಹಾಕೋಣ ಬನ್ನಿ
-ಹೆಚ್.ಸಿ.ಯೋಗೇಶ್‌, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.