1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

​ಶಿವಮೊಗ್ಗ : ಶಾಲಾ ಕಟ್ಟಡದ ಎನ್‌ಒಸಿ  ನೀಡಲು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
​ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಲೋಕಾಯುಕ್ತ ದಾಳಿಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.
​ಶಿಕಾರಿಪುರ ಟೌನ್‌ನಲ್ಲಿರುವ ಶಾಲೆಯೊಂದರ ಹೊಸ ಕಟ್ಟಡಕ್ಕೆ ಅಗ್ನಿಶಾಮಕ ದಳದಿಂದ ಪರವಾನಗಿ ಪಡೆಯಬೇಕಾಗಿತ್ತು. ಈ NOC ನೀಡಲು ಅಧಿಕಾರಿ ಅಶೋಕ್ ಕುಮಾರ್ ಅವರು ದೂರುದಾರರಾದ ಅನೂಪ್ ಎಂಬುವವರಿಂದ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಅನೂಪ್ ಅವರು ಈ ಕುರಿತು ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
​ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಕ್ಕಾ ಪ್ಲಾನ್ ನಡೆಸಿ ಟ್ರ್ಯಾಪ್ ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ, ಇಂದು ದೂರುದಾರ ಅನೂಪ್ ಅವರಿಂದ ಅಧಿಕಾರಿ ಅಶೋಕ್ ಕುಮಾರ್ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿ, ಅಧಿಕಾರಿಯನ್ನು ಹಣಸಮೇತ ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ.
​ಈ ಯಶಸ್ವಿ ದಾಳಿಯು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ  ಚಂದ್ರಶೇಖರ್ ಬಿ.ಪಿ. ಅವರ ನೇತೃತ್ವದಲ್ಲಿ ನಡೆದಿದ್ದು, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ, ರುದ್ರೇಶ್ ಹಾಗೂ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
​ಪ್ರಸ್ತುತ ಲಂಚಬಾಕ ಅಧಿಕಾರಿ ಅಶೋಕ್ ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.